ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭೆ ಮತದಾನ ನಡೆಯಲಿದೆ. ಈ ಹಿಂದೆ ಏಕ ಹಂತದ ಮತದಾನ ನಡೆಸಲು ಉದ್ದೇಶಿಸಿದ್ದ ಭಾರತ ಚುನಾವಣಾ ಆಯೋಗವು (ಇಸಿಐ) ಬಿಸಿಲಿನ ತಾಪದಲ್ಲಿ ಚುನಾವಣೆ ನಡೆಸಲು ವಿಸ್ತೃತ ವ್ಯವಸ್ಥೆಗಳನ್ನು ಮಾಡಿತ್ತು. ಆದರೆ ಇದೀಗ ಮಳೆರಾಯನ ಅಬ್ಬರ ಇರಲಿದೆ ಎಂದು ಇಲಾಖೆ ಸೂಚನೆ ನೀಡಿದ್ದು. ಚುನಾವಣಾ ಆಯೋಗಕ್ಕೆ ತಲೆನೋವಾಗಿ ಪರಿಣಮಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ಈಗ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (ಭಾರೀ ಮಳೆ ಎಂದರ್ಥ) ಘೋಷಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕವಾದ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಿದೆ. ಇದರಿಂದಾಗಿ ಭಾರತ ಚುನಾವಣಾ ಆಯೋಗದ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳು (EVM) ಮತ್ತು ಇತರೆ ಮತದಾನ ಸಾಮಗ್ರಿಗಳ ಸಾಗಾಟ ಹಾಗೂ ವಿತರಣೆಯ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ಇಸಿಐಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು, ಮಳೆಯ ಬಗ್ಗೆ ಯಾವುದೇ ಸುಳಿವು ಅಥವಾ ವರದಿಗಳು ನಮಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.