ಗದಗ: ನಡೆದಾಡುವ ದೇವರು, ಅಂಧರ ಬಾಳಲ್ಲಿ ನಂದಾದೀಪವಾಗಿ ಬೆಳಗಿದ ಮಹಾನ್ಚೇತನ. ಸಂಗೀತ ಲೋಕದ ದಿಗ್ಗಜ. ಉತ್ತರ ಕರ್ನಾಟಕದ ಕೋಟ್ಯಾಂತರ ಭಕ್ತರ ಪಾಲಿನ ಆರಾಧ್ಯ ದೈವ. ಹೌದು ಇದು ಉತ್ತರ ಕರ್ನಾಟಕ ಪ್ರಸಿದ್ಧ ಮಠ ವೀರೇಶ್ವರ ಪುಣ್ಯಾಶ್ರಮ. ಶ್ರೀಮಠದ ಲಿಂಗೈಕ್ಯ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳು ಉತ್ತರ ಕರ್ನಾಟಕ ಜನರ ಪಾಲಿನ ನಡೆದಾಡುವ ದೇವರು. ಲಕ್ಷಾಂತರ ಅಂಧ, ಅನಾಥ ಮಕ್ಕಳ ಬಾಳಲ್ಲಿ ನಂದಾದೀಪವಾಗಿ ಬೆಳಗಿದ ಇವರು 2010ರಲ್ಲಿ ಲಿಂಗೈಕ್ಯ ಆಗಿದ್ದಾರೆ. ಹೀಗಾಗಿ ಗದಗ ನಗರದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಾಣ ಆಗಬೇಕು ಎನ್ನುವುದು ಭಕ್ತರ ಒತ್ತಾಯವಾಗಿತ್ತು. ಅದಕ್ಕೊಸ್ಕರ ಅಂದಿನ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪ ಅವರು 5 ಕೋಟಿ ಅನುದಾನ ಘೋಷಣೆ ಮಾಡಿದ್ರು. ಬಳಿಕ 2016ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 5ಕೋಟಿ ವೆಚ್ಚದಲ್ಲಿ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿತ್ತು.
ಲೋಕೋಪಯೋಗಿ ಇಲಾಖೆ ಮೂಲಕ ಮಹಾರಾಷ್ಟ್ರ ಶಿರ್ಕೆ ಕನ್ಸಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ 5 ವರ್ಷಗಳು ಕಳೆದರೂ ಸ್ಮಾರಕ ಭವನದ ಕಾಮಗಾರಿ ಮುಗಿಯುತ್ತಿಲ್ಲ. ಪವಿತ್ರ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ
ಹೌದು 5 ಕೋಟಿ ಅನುಮೋದನೆ ನೀಡಿದ್ದ ಕಟ್ಟಡ 6ಕೋಟಿ ಖರ್ಚು ಮಾಡಿದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅರ್ಧಕ್ಕೆ ಕಾಮಗಾರಿ ನಿಂತು ಹೋಗಿದೆ. ಇದೀಗ ಈ ಕಟ್ಟಡದಲ್ಲಿ ನಡೆಯಬಾರದ ಚಟುವಟಿಕೆಗಳು ನಡೆಯುತ್ತಿವೆ. ಆ ಪವಿತ್ರ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಕಿಡಿಗೇಡಿಗಳ, ಕುಡುಕರ ಅಡ್ಡಾ ಆಗಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸ್ಮಾರಕ ಭವನಕ್ಕೆ ಬಾಗಿಲು ಇಲ್ಲ. ಸರಿಯಾದ ಕಿಟಕಿಗಳು ಇಲ್ಲದೇ ಅಸ್ತಿಪಂಜರದಂತಾಗಿದೆ. ಈಗ ಎರಡು ವರ್ಷಗಳಿಂದ ಅನುದಾನ ಕೊರತೆ ನೆಪ ಹೇಳಿ ಕಾಮಗಾರಿ ಅರ್ಧಮರ್ಧ ಮಾಡಿ ನಿಲ್ಲಿಸಲಾಗಿದೆ. ಹೀಗಾಗಿ ಸ್ಮಾರಕ ಭವನ ಅಕ್ಷರಶಃ ಭೂತ ಬಂಗಲೆಯಾಗಿದೆ.
ಅಷ್ಟೇ ಅಲ್ಲದೇ ಈ ಜಾಗದಲ್ಲಿ ನಡೆಯಬಾರದ ಕೆಟ್ಟ ಕೆಲಸಗಳು ನಡೆಯುತ್ತಿವೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಲಕ್ಷಾಂತರ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀ ಮಠದ ಭಕ್ತರು ಸಾಕಷ್ಟು ಬಾರಿ ಸರ್ಕಾರ, ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಪವಿತ್ರ ತಾಣದ ವ್ಯವಸ್ಥೆ ನೋಡಿ ಶ್ರೀಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪವಿತ್ರ ತಾಣ ಅನೈತಿಕ ಚಟುವಟಿಕೆಗಳ ಅಡ್ಡಾ ಆಗಿದ್ದು, ನೋವಿನ ಸಂಗತಿಯಾಗಿದೆ. ಆದಷ್ಟು ಬೇಗ ಕಾಮಗಾರಿ ಮಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಡೆದಾಡುವ ದೇವರಿಗೆ ಆಗುತ್ತಿರುವ ಅಪಮಾನ ಕಣ್ಣಿಗೆ ಕಾಣುತ್ತಿಲ್ಲವಾ ಎಂದು ಭಕ್ತರು ಪ್ರಶ್ನೆ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಮಾರಕ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.