ಬೆಂಗಳೂರು: ಪವರ ಸ್ಟಾರ್ ಪುನೀತ್ ರಾಜಕುಮಾರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಂದು ಬೆಳಿಗ್ಗೆ ಜಿಮ್ ಮಾಡುವ ವೇಳೆ ಪುನಿತ್ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದ ಕಾರಣ ಅವರನ್ನು ಕೂಡಲೇ ರಮಣರಾವ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ನೀಡಲಾಗಿದ್ದು, ಕ್ಷಣ ಕ್ಷಣಕ್ಕೂ ಪುನಿತ್ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವ ಕಾರಣಕ್ಕೆ ಕೂಡಲೇ ಅಲ್ಲಿಂದ ಪುನಿತ್ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿಯೇ ಎದೆಯಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡ ನಂತರವೂ ಪುನಿತ್ ಇಂದು ಬೆಳಿಗ್ಗೆ ಜಿಮ್ ನಲ್ಲಿ ಕಸರತ್ತು ನಡೆಸುತ್ತಿರುವ ವೇಳೆ ಅಸ್ವಸ್ತಗೊಂಡಿದ್ದಾರೆ. ಸದ್ಯ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಪುನೀತ್ ರಾಜಕುಮಾರ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಶಿವಣ್ಣ ಸೇರಿದಂತೆ ರಾಜಕುಮಾರ್ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾವಿಸಿದ್ದು ಕಣ್ಣಿರಿಡುತ್ತಿದ್ದಾರೆ. ವಿಕ್ರಂ ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಆಸ್ಪತ್ರೆಗೆ ಆಗಮಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಪುನಿತ್ ಅನಾರೋಗ್ಯ ಸುದ್ದಿ ತಿಳಿಯುತ್ತಿದ್ದಂತೆ ಬಿಡದಿ ತೋಟದ ಮನೆಗೆಯಿಂದ ವಿಕ್ರಂ ಆಸ್ಪತ್ರೆಯತ್ತ ದಾವಿಸುತ್ತಿದ್ದಾರೆ.
ಉಳಿದಂತೆ ನಟರಾದ ಯಶ್, ರವಿಚಂದ್ರನ್,ರಾಕಲೈನ್ ವೆಂಕಟೇಶ ಸೇರಿದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಆಗಮಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಪುನಿತ್ ಅಭಿಮಾನಿಗಳು ಆಸ್ಪತ್ರೆಯತ್ತ ಬರುತ್ತಿದ್ದು ಆತಂಕ ಮನೆ ಮಾಡಿದೆ.