ಧಾರವಾಡ: ನಟ ದಿವಂಗತ ಅಪ್ಪು ಇದ್ದಾಗ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ರು. ಕಷ್ಟ ಅಂತಾ ಬಂದವರಿಗೆ ನೆರವಾಗಿದ್ದಾರೆ. ಈಗ ಅಪ್ಪುನಮ್ಮೊಂದಿಗೆ ಇಲ್ಲದೇ ಇದ್ರೂ ಒಂದಷ್ಟು ಜನ ಅವರಿಂದಲೇ ಬದುಕು ಸುಂದರವಾಗಿಸಿಕೊಂಡಿದ್ದಾರೆ. ನಮ್ಮ ಪ್ರೀತಿಯ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಹದಿನೇಳು ದಿನಗಳೇ ಕಳೆದಿವೆ. ಆದ್ರೆ ರಾಜಕುಮಾರನಿಲ್ಲದ ನೋವು ಅವರ ಅಭಿಮಾನಿಗಳನ್ನು ಪ್ರತಿಕ್ಷಣವನ್ನೂ ಹಿಂಡಿಹಿಪ್ಪೆ ಮಾಡುತ್ತಿದೆ.
ಅಪ್ಪು ಬದುಕಿದ್ದಾಗ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದರು. ಎಡಕೈಯಿಂದ ಕೊಟ್ಟಿದ್ದು ಬಲಕೈಗೆ ಗೊತ್ತಾಗದಂತೆ ನೂರಾರು ಜನರಿಗೆ ಆಸರೆಯಾಗಿದ್ರು. ಈಗ ಅಪ್ಪು ನಮ್ಮ ನಡುವೆ ಇಲ್ಲದೇ ಇದ್ರು, ಅವರ ಹೆಸರಿನಲ್ಲಿ ಎಷ್ಟೋ ಜನ ತಮ್ಮ ಉಪಜೀವನ ಕಂಡುಕೊಂಡಿದ್ದಾರೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದ ದಾದಾಪಿರ ಮತ್ತು ಇಬ್ರಾಹಿಂ ಎನ್ನುವ ವಿಶೇಷಚೇತನರಿಬ್ರು ಅಪ್ಪು ಹಾಡುಗಳನ್ನ ಹಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪುಟ್ಟರಾಜ ಗವಾಯಿ ಕ್ಷೇಮಾಭಿವೃದ್ಧಿ ಸಂಘದ ಹೆಸರಿನಲ್ಲಿ ಕೈಯಲ್ಲಿ ಒಂದು ಮೈಕ್ ಮತ್ತು ಒಂದು ಸ್ಪೀಕರ್ ಇಟ್ಟುಕೊಂಡು ಹಾಡು ಹಾಡುತ್ತಿದ್ದಾರೆ.
ಅಪ್ಪು ಅವರ ಹಾಡುಗಳು ಎಲ್ಲೇ ಕಿವಿಗೆ ಬಿದ್ರು ಜನ ಥಟ್ ಅಂತಾ ಆ ಕಡೆ ಗಮನ ಕೊಡ್ತಾರೆ. ಅದೇ ರೀತಿ ಈ ಇಬ್ರು ಕಲಾವಿದರು ಬೀದಿಯಲ್ಲಿ ಹಾಡುವುದನ್ನು ನೋಡಲು ಎಷ್ಟೋ ಜನ ಬಂದು ನಿಲ್ಲುತ್ತಾರೆ. ಅಲ್ಲದೇ ತಮ್ಮದೇ ಹಾಡಿನ ಟ್ರ್ಯಾಕ್‍ನಲ್ಲಿ ‘ಅಪ್ಪು ಅಣ್ಣ ಮತ್ತೆ ಹುಟ್ಟಿ ಬಾ’ ಎಂಬ ಇವರ ಹಾಡು ಅದೆಷ್ಟೋ ಜನರ ಮನ ತಟ್ಟುತ್ತಿದೆ.
ಒಟ್ಟಿನಲ್ಲಿ ನೂರಾರು ಜನರಿಗೆ ಸಹಾಯ ಮಾಡುತ್ತಿದ್ದ ಅಪ್ಪು ನಮ್ಮ ನಡುವೆ ಇಲ್ಲದೇ ಇದ್ರು ಹಲವು ಜೀವಗಳಿಗೆ ದುಡಿದು ತಿನ್ನಲು ದಾರಿ ದೀಪ ಆಗಿದ್ದಾರೆ. ಸದ್ಯ ಇವರ ಹಾಡುಗಳನ್ನೇ ಹಾಡುತ್ತಾ ಈ ಅಂಗವಿಕಲ ಕಲಾವಿದರು ತಮ್ಮ ಜೀವನ ನಡೆಸುತ್ತಿರುವುದು ನಿಜಕ್ಕೂ ಮನ ಕಲಕುವಂತಿದೆ.