ಅಬ್ಬಬ್ಬಾ ಅಂದ್ರೆ ನಾವು ಬೆಳೆಯುವ ಕುಂಬಳಕಾಯಿ ಅಥವಾ ಚೀನಿಕಾಯಿ ಎಷ್ಟು ಕೆಜಿ ತೂಗವಿರಬಹುದು.. ? ಹಾಗೂ, ಸಾಮಾನ್ಯವಾಗಿ 7, 9 ಇಂಚು ವ್ಯಾಸದ ಕುಂಬಳಕಾಯಿಯನ್ನು ನಮ್ಮ ದೇಶದ ರೈತರು ಬೆಳೆಯುತ್ತಾರೆ. ಹಾಗೂ, ಇದನ್ನು ನಾವು ತಿನ್ನಲು ಹಾಗೂ ಹಬ್ಬಗಳಿಗೆ ಪೂಜೆಗೆ ಬಳಸುತ್ತೇವೆ. ಇನ್ನು, ಹ್ಯಾಲೋವೀನ್ ದಿನದ ಬಗ್ಗೆ ಕೇಳಿದ್ದೀರಲ್ಲ.. ಸದ್ಯದಲ್ಲೇ ಹ್ಯಾಲೋವೀನ್ ಡೇ ಮತ್ತೆ ಬರುತ್ತಿದೆ.
ಅಕ್ಟೋಬರ್ 31 ರಂದು ಹ್ಯಾಲೋವೀನ್ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆ ಪಾಶ್ಚಿಮಾತ್ಯ ರಾಷ್ಟ್ರದ ಜನರು ಈಗಾಗಲೇ ಚೀನಿಕಾಯಿ ಅಥವಾ ಕುಂಬಳಕಾಯಿಯನ್ನು ಕೊಂಡುಕೊಳ್ಳಲು ಆರಂಭಿಸಿದ್ದಾರೆ ಹಾಗೂ ಅದರಿಂದ ವಿವಿಧ ವಿನ್ಯಾಸ, ಮುಖದ ಕೆತ್ತನೆಯನ್ನೂ ಮಾಡ್ತಿದ್ದಾರೆ. ಈ ಕುಂಬಳಕಾಯಿಗಳನ್ನು ಪಡೆದುಕೊಳ್ಳಲು ಹಲವರು ಮಾರ್ಕೆಟ್ಗಳಿಗೆ ಹೋಗ್ತಾರೆ. ಆದರೆ, ತಮ್ಮದೇ ತೋಟ, ಫಾರ್ಮ್ ಇರುವ ಹಲವರು ಅದನ್ನು ತಾವೇ ಬೆಳೆದುಕೊಳ್ತಾರೆ.
2020ರಲ್ಲಿ ಅಮೆರಿಕದ ಮಿನ್ನೆಸೋಟಾದ ವ್ಯಕ್ತಿ ಟ್ರಾವಿಸ್ ಜಿನೆಗರ್ 1065 ಕೆಜಿ ತೂಕದ ಕುಂಬಳಕಾಯಿ ಬೆಳೆದು, ಅದಕ್ಕೆ ಟೈಗರ್ ಕಿಂಗ್ ಅಂತ ಹೆಸರಿಟ್ಟಿದ್ದರು. ಅಲ್ಲದೆ, ಸೂಪರ್ ಬೌಲ್ ಆಫ್ ಕುಂಬಳಕಾಯಿ ಪ್ರಶಸ್ತಿಯನ್ನೂ ಗೆದ್ದಿದ್ದರು. ವಿಶ್ವ ಚಾಂಪಿಯನ್ಷಿಪ್ ಪಂಪ್ಕಿನ್ ವೇ – ಆಫ್ ಎಂದೂ ಕರೆಯುವ ಈ ಪ್ರಶಸ್ತಿಯಲ್ಲಿ ಅಮೆರಿಕದ ರೈತರು ತಾವು ಬೆಳೆದ ದೊಡ್ಡ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಈ ಸ್ಪರ್ಧೆಗೆ ಆ ಸಾವಿರಾರು ಕೆಜಿ ತೂಕದ ಕುಂಬಳಕಾಯಿ ತೆಗೆದುಕೊಂಡು ಹೋಗಲು ಟ್ರಾವಿಸ್ ಜಿನೆಗರ್ ಭಾರಿ ಕಷ್ಟಪಟ್ಟಿದ್ದರು. 35 ಗಂಟೆಗಳ ಕಾಲ ವಾಹನದಲ್ಲಿ ಅದನ್ನು ಬ್ಲಾಂಕೆಟ್ ಹಾಗೂ ನೂಡಲ್ಸ್ನಲ್ಲಿ ಮುಚ್ಚಿಟ್ಟು ತೆಗೆದುಕೊಂಡು ಹೋಗಿದ್ದರು. ಇನ್ನು, ಈ ಹಳೆಯ ವಿಷಯ ಈಗ್ಯಾಕೆ ಅಂತೀರಾ..? ಅವರು, ಇದೇ ರೀತಿ ಮತ್ತೊಂದು ಬೃಹತ್ ಗಾತ್ರದ ಕುಂಬಳಕಾಯಿ ಬೆಳೆದಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇ ಯಲ್ಲಿ ನಡೆದ ಈ ವರ್ಷದ ಸೂಪರ್ ಬೌಲ್ ಸ್ಪರ್ಧೆಯಲ್ಲಿ ಜಿನೆಗರ್ ಬರೋಬ್ಬರಿ 2,560 ಪೌಂಡ್ ಅಂದರೆ 1161 ಕೆಜಿ ತೂಕದ ಕುಂಬಳಕಾಯಿ ಬೆಳೆದು ಮತ್ತೆ ಅವರು ವಿಶ್ವ ಚಾಂಪಿಯನ್ಶಿಪ್ ಪಂಪ್ಕಿನ್ ವೇ – ಆಫ್ ಸ್ಪರ್ಧೆಯ ವಿಜೇತರಾಗಿದ್ದಾರೆ. ಈ ಕುಂಬಳಕಾಯಿಗೆ ಅವರು ಮ್ಯಾವೆರಿಕ್ ಎಂಬ ಹೆಸರಿಟ್ಟಿದ್ದಾರೆ.
ಇನ್ನು, ಈ ಬಾರಿ ಕೂಡ 35 ಗಂಟೆಗಳ ಕಾಲ ಟ್ರಕ್ನಲ್ಲಿ ಆ ಸಾವಿರಾರು ಕೆಜಿ ತೂಕದ ಚೀನಿಕಾಯಿಯನ್ನು ಸಾಗಿಸಿದ್ದಾರೆ. ತನ್ನ ಮನೆಯಿಂದ ಅನೋಕಾಗೆ ಹಾಗೂ ಹಾಫ್ ಮೂನ್ ಬೇಗೆ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಅಮೆರಿಕದ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಶಸ್ತಿ ಜೀವನದಲ್ಲಿ ಒಮ್ಮೆ ಎಂದು ಹಲವರು ಹೇಳುತ್ತಾರೆ. ಆದರೆ, ನನಗೆ 2 ಬಾರಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು, ಮ್ಯಾವೆರಿಕ್ ಎಂಬ ಈ ಕುಂಬಳಕಾಯಿ, ಅಮೆರಿಕದ ಅತಿ ತೂಕದ ಚೀನೀಕಾಯಿ ಎಂಬ ದಾಖಲೆಗೆ ಪಾತ್ರವಾಗಿದೆ. ಆದರೆ, ವಿಶ್ವದ ಅತಿ ಹೆಚ್ಚು ತೂಕದ ಕುಂಬಳಕಾಯಿ ಬೇರೆಯವರ ಹೆಸರಿನಲ್ಲಿದೆ. ಸ್ಟೆಫಾನೋ ಕುಟ್ರಿಪಿ ಎಂಬುವರು ಬರೋಬ್ಬರಿ 2,703 ಪೌಂಡ್ ಯೂಕದ ಕುಂಬಳಕಾಯಿ ಬೆಳೆದಿದ್ದು, ವಿಶ್ವ ದಾಖಲೆ ಅವರ ಬಳಿಯಲ್ಲಿಯೇ ಇದೆ.