ಶಿಥಿಲೀಕರಣಗೊಂಡಿದ್ದ ಆರೋಗ್ಯ ಇಲಾಖೆಯ ವಸತಿ ಗೃಹಗಳಿಗೆ ಕಾಯಕಲ್ಪ
ಗೋಕಾಕ್: ಕೋವಿಡ್ ಎರಡನೇ ಅಲೆ ಸಾಕಷ್ಟು ಪರಿಣಾಮ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅರಭಾವಿ ಕ್ಷೇತ್ರದ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಅನೇಕ ಕ್ರಮ ತೆಗೆದುಕೊಂಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಮೂಡಲಗಿಯಲ್ಲಿ ಸೋಂಕಿತರಿಗಾಗಿ ಮತ್ತು ಪ್ರಾಥಮಿಕ ಸಂಪರ್ಕಿತರಿಗಾಗಿ ಮತ್ತಷ್ಟು ಆಕ್ಸಿಜನ್ ಬೆಡ್ ಗಳನ್ನು ಒದಗಿಸಿದ್ದಾರೆ. ಜತೆಗೆ ಸೋಂಕು ಲಕ್ಷಣ ಇರುವವರ ಪರೀಕ್ಷೆಗಾಗಿ ಉಚಿತವಾಗಿ ಓಪಿಡಿಗಳನ್ನು ಆರಂಭಿಸುವ ಮೂಲಕ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹರಡುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಉಚಿತವಾದ ಚಿಕಿತ್ಸೆಯ ಜತೆಗೆ ಉಚಿತ ಔಷಧಗಳನ್ನು ನೀಡಲು ಮುಂದಾಗಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ ಕಟಿಬದ್ಧರಾಗಿದ್ದಾರೆ.
ಮೂಡಲಗಿಯಲ್ಲಿ ನವೀಕೃತಗೊಂಡ ವಸತಿ ಗೃಹಗಳು:
ಮೂಡಲಗಿಯಲ್ಲಿ ಪಾಳುಬಿದ್ದಿರುವ ಆರೋಗ್ಯ ಇಲಾಖೆಯ ಮೂರು ವಸತಿ ಗೃಹಗಳನ್ನು ಸ್ವತಃ ಶಾಸಕ ಬಾಲಚಂದ್ರ ಜಾರಕಿಹೊಳಿ ಆರೇಳು ಲಕ್ಷ ರೂ. ವೆಚ್ಚ ಮಾಡಿ ನವೀಕರಣ ಮಾಡಿಸಿದ್ದಾರೆ. ಕಿಟಕಿ, ಬಾಗಿಲು, ಶೌಚಾಲಯಗಳು, ಸ್ನಾನಗೃಹ, ಚಾವಣಿ, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವೂ ವಸತಿ ಗೃಹದಲ್ಲಿ ಹಾಳಾಗಿದ್ದವು. ಇವುಗಳನ್ನು ಕೊರೋನಾ ಸಂದರ್ಭದಲ್ಲಿ ಸಮರ್ಪಕವಾಗಿ ಬಳಸಬೇಕು ಎಂದು ಆಲೋಚಿಸಿ ತಮ್ಮ ಸ್ವಂತ ವೆಚ್ಚದಲ್ಲಿ ಎಲ್ಲವನ್ನೂ ನವೀಕರಣಗೊಳಿಸಿದರು.
ನವೀಕೃತಗೊಂಡಿರುವ ವಸತಿಗೃಹದಲ್ಲಿ ಕೊರೋನಾ ಸೋಂಕಿನ ಲಕ್ಷಣಗಳಿರುವವರಿಗೆ, ಜ್ವರ, ನೆಗಡಿ, ಕೆಮ್ಮಿನಂತಹ ಸ್ವಾಭಾವಿಕ ಲಕ್ಷಣಗಳ ಕಾಯಿಲೆ ಇರುವವರಿಗೆ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಇಲ್ಲಿ ಒಪಿಡಿಗಳನ್ನು ನಿರ್ಮಿಸಿದ್ದಾರೆ. ಜತೆಗೆ ಪರೀಕ್ಷೆ ಮಾಡಿಸಿಕೊಂಡ ಪ್ರತಿಯೊಬ್ಬರಿಗೂ ಉಚಿತವಾಗಿ ಔಷಧಗಳನ್ನು ನೀಡಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಮೂಡಲಗಿಯಲ್ಲಿ ಸಿದ್ದವಾದವು 24 ಆಕ್ಸಿಜನ್ ಬೆಡ್ ಗಳು:
ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ 24 ಆಕ್ಸಿಜನ್ ಬೆಡ್ಗಳ ಕೋವಿಡ್ ಕೇರ್ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಇದರ ನಡುವೆ ಮತ್ತೆ 12 ಆಕ್ಸಿಜನ್ ಬೆಡ್ಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ. ಮಾತ್ರವಲ್ಲಇನ್ನೂ 20 ಆಕ್ಸಿಜನ್ ಬೆಡ್ ಗಳನ್ನು ಒದಗಿಸಲು ಕಾರ್ಯಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಸೋಂಕು ತಡೆಯಲು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಗೋಕಾಕ ಮತ್ತು ಮೂಡಲಗಿ ತಾಲೂಕಿನ ಪ್ರತಿ ಕೋವಿಡ್ ಕೇರ್ ಸೆಂಟರ್ ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಶೀಘ್ರದಲ್ಲಿಯೇ ಅಳವಡಿಸಲಾಗುವುದು. ಪ್ರತಿಯೊಂದು ಗ್ರಾಮಗಳಲ್ಲಿ ಸೋಂಕು ತಡೆ ದ್ರಾವಣ ಸಿಂಪರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಉಚಿತ ಔಷಧ ವಿತರಣೆ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗುವ ಪ್ರತಿಯೊಬ್ಬ ಸೋಂಕಿತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉಚಿತ ಔಷಧವನ್ನು ನೀಡುತ್ತಿದ್ದಾರೆ. ಕೇವಲ ದಾಖಲಾಗುವ ರೋಗಿಗಳಿಗೆ ಮಾತ್ರವಲ್ಲ, ಓಪಿಡಿಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರಿಗೂ ಇದೇ ರೀತಿಯ ಉಚಿತ ಔಷಧಗಳನ್ನು ವಿತರಿಸಲಿದ್ದಾರೆ. ಮಾತ್ರವಲ್ಲ, ಗೋಕಾಕ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 35 ಆಕ್ಸಿಜನ್ ಬೆಡ್ ಗಳನ್ನು ನಿರ್ಮಿಸಿದ್ದಾರೆ. ಮಲ್ಲಾಪುರ ಪಿ.ಜಿಯಲ್ಲಿರುವ ಮೊರಾರ್ಜಿ ವಸತಿ ನಿಲಯದಲ್ಲಿ 20 ಆಕ್ಸಿಜನ್ ಬೆಡ್, 60 ಆಕ್ಸಿಜನ್ರಹಿತ ಬೆಡ್ಗಳನ್ನು ನಿರ್ಮಿಸಿದ್ದು, ಕ್ಷೇತ್ರದ ಜನರನ್ನು ಸಂಕಟದ ಪರಿಸ್ಥಿತಿಯಲ್ಲಿಯೂ ಕೈಹಿಡಿದಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಕ್ಷೇತ್ರದಲ್ಲಿ ಸೋಂಕು ತಡೆಗಟ್ಟಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸೋಂಕಿತರಿಗಾಗಿ ಅಗತ್ಯ ಇರುವ ಆಸ್ಪತ್ರೆ, ಆಕ್ಸಿಜನ್ ಬೆಡ್, ವೆಂಟಿಲೇಟರ್ನಂತಹ ವೈದ್ಯಕೀಯ ಸೌಲಭ್ಯಗಳನ್ನು ಕ್ಷೇತ್ರದಲ್ಲಿ ಒದಗಿಸಲಾಗಿದೆ. ಜತೆಗೆ ಉಚಿತ ಔಷಧ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಗ್ರಾಮಗಳಲ್ಲಿಯೂ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಿ ಅಗತ್ಯ ಕ್ರಮಕ್ಕೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿರುವೆ. ಜನರು ಕೂಡ ಈ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ಬರದೆ ಕೊರೋನಾ ನಿಯಂತ್ರಿಸಲು ಸಹಕಾರ ನೀಡಬೇಕು. ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ಬದ್ಧರಿದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಸಹಾಯವಾಣಿ ಆರಂಭ: ಸೋಂಕಿತರ ನೆರವಿಗಾಗಿಯೇ ಎನ್ಎಸ್ಎಫ್ ಘಟಕ ಗೋಕಾಕ್ ಕೋವಿಡ್-19 ಸಹಾಯವಾಣಿ ಕೇಂದ್ರವನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಲಾಗಿದೆ. ಗೋಕಾಕ ಮತ್ತು ಮೂಡಲಗಿ ತಾಲೂಕಿನ ಜನರು ಸಹಾಯವಾಣಿ 8660014976, 8660038268 ಗೆ ಜನರು ಸಂಪರ್ಕಿಸಬಹುದು.