ಕೂಗು ನಿಮ್ಮದು ಧ್ವನಿ ನಮ್ಮದು

ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಬಗ್ಗೆ ದಾಖಲೆಗಳಿಲ್ಲ, ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ: ಕೇಂದ್ರ ಸರ್ಕಾರ

ನವದೆಹಲಿ: ೩ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ರೈತರು ಸಾವನ್ನಪ್ಪಿರುವ ಬಗ್ಗೆ ಸರ್ಕಾರದ ಹತ್ತಿರ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಸಂಸತ್‌ನಲ್ಲಿ ಲಿಖಿತ ಪ್ರತಿಕ್ರಿಯೆಯನ್ನು ನೀಡಿದ್ರು. ಸಂಸತ್‌ ಅಧಿವೇಶನದಲ್ಲಿ ರೈತರ ಪ್ರತಿಭಟನೆ ಕುರಿತು ಪ್ರತಿಪಕ್ಷಗಳು ಧ್ವನಿ ಎತ್ತಿದವು.

ಪ್ರತಿಭಟನೆ ಸಮಯದಲ್ಲಿ ಸಾವಿಗೀಡಾದ ರೈತರ ಕುಟುಂಬಗಳಿಗೆ ಹಣಕಾಸು ನೆರವು ನೀಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ಈ ಸಂಬಂಧ ಕೃಷಿ ಇಲಾಖೆಯಲ್ಲಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ರು.
ಕೇಂದ್ರದ ೩ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ೧ ವರ್ಷದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ವರ್ಷದ ಅವಧಿಯಲ್ಲಿ ಸುಮಾರು ೭೦೦ ರೈತರು ಪ್ರತಿಭಟನಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆಂದು ರೈತ ನಾಯಕರು ಮತ್ತು ಪ್ರತಿಪಕ್ಷಗಳು ಹೇಳಿವೆ. ರೈತರ ಪ್ರತಿಭಟನೆಗೆ ಮಣಿದು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ರು. ನಂತರ ಸಂಸತ್‌ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂಪಡೆಯುವ ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಮುಂದಾಯ್ತು. ಚರ್ಚೆಗೆ ಒಳಪಡಿಸದೇ ಮಸೂದೆಗಳ ಅಂಗೀಕಾರವು ಸರಿಯಲ್ಲ.

ಪ್ರತಿಭಟನೆಯ ವೇಳೆಯಲ್ಲಿ ನೂರಾರು ರೈತರು ಮೃತಪಟ್ಟಿದ್ದಾರೆ. ಅವರಿಗೆ ಕೇಂದ್ರ ಸರ್ಕಾರವು ಪರಿಹಾರ ನೀಡಬೇಕು. ಹಾಗಾಗಿ ಮಸೂದೆಯನ್ನು ಚರ್ಚೆಗೆ ಒಳಪಡಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು. ಪ್ರತಿಪಕ್ಷಗಳ ವಿರೋಧದ ನಡುವೆಯೂ ಮಸೂದೆಗೆ ಅಂಗೀಕಾರ ನೀಡಲಾಯ್ತು. ಕೋರೊನಾದಿಂದ ಬಳಲುತ್ತಿದ್ದವರಿಗೆ ಆಮ್ಲಜನಕ ಪೂರೈಕೆಯಲ್ಲಿ ವಿಳಂಬವಾದಾಗ ನೂರಾರು ಸಂಖ್ಯೆಯಲ್ಲಿ ಜನ ಸಾವಿಗೀಡಾಗಿದ್ರು. ಮೃತ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಪ್ರತಿಪಕ್ಷಗಳು ಕೇಂದ್ರವನ್ನು ಒತ್ತಾಯಿಸಿದ್ರು. ಆಗಲೂ ಸಹ ಕೇಂದ್ರ ಸರ್ಕಾರ, ನಮ್ಮಲ್ಲಿ ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪಿದವರ ಬಗ್ಗೆ ದತ್ತಾಂಶ ಇಲ್ಲ ಎಂದು ಹಾರಿಕೆಯ ಉತ್ತರವನ್ನು ನೀಡಿ ಆಕ್ರೋಶಕ್ಕೆ ಗುರಿಯಾಗಿತ್ತು. ಈಗ ಮತ್ತೆ ಅದೇ ರೀತಿಯ ಹೇಳಿಕೆ ಮೂಲಕ ಮತ್ತೊಂದು ಟೀಕೆಗೆ ಗುರಿಯಾಗಿದೆ.

error: Content is protected !!