ಕೂಗು ನಿಮ್ಮದು ಧ್ವನಿ ನಮ್ಮದು

ಮೊದಲು ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಿ: ಅಮಿತ್‌ ಮಾಳವೀಯಾಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

ಬೆಂಗಳೂರು: ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ನೀವು ಯಾವೆಲ್ಲಾ ಚುನಾವಣೆಗಳನ್ನು ಗೆದ್ದಿದ್ದೀರಿ? ಮೊದಲು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗೆದ್ದು ತೋರಿಸಿ. ನಂತರ ಈ ರೀತಿ ಮಾತನಾಡಿ. ಇದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ಐಟಿ ಘಟಕದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಮಾಳವೀಯಾಗೆ ತಿರುಗೇಟು ನೀಡಿರುವ ಪರಿ.
ಹೌದು, ಶಾಂತಿ ಕದಡಿದರೆ ಆರ್‌ಎಸ್‌ಎಸ್‌, ಬಜರಂಗ ದಳವನ್ನೂ ನಿಷೇಧಿಸಲು ಹಿಂಜರಿಯುವುದಿಲ್ಲ ಎಂಬ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಪ್ರಿಯಾಂಕ್‌ ಖರ್ಗೆ ಹೇಳಿಕೆ ಕುರಿತು ಟ್ವೀಟ್‌ ಮಾಡಿದ್ದ ಅಮಿತ್‌ ಮಾಳವೀಯಾ, ಪ್ರಿಯಾಂಕ್‌ ಖರ್ಗೆಯವರೇನು ಕರ್ನಾಟಕದ ಸೂಪರ್‌ ಸಿಎಂ ಆಗಿದ್ದಾರೆಯೇ? ಎಂದು ಪ್ರಶ್ನಿಸಿದ್ದರು.

ಅದಲ್ಲದೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರರೆಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಮೀರಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆಯೇ? ಖಾತೆಯಿಲ್ಲದ ಸಚಿವರು ಅನಗತ್ಯ ಹೇಳಿಕೆ ನೀಡುವ ಬದಲಿಗೆ 5 ಗ್ಯಾರಂಟಿಗಳ ಜಾರಿ ಬಗ್ಗೆ ಗಮನ ಹರಿಸಬೇಕು. ಈಗಾಗಲೇ ಹೊಸ ಸರಕಾರದ ಬಗ್ಗೆ ಜನ ಬೇಸರಗೊಂಡಿದ್ದು, ಗ್ಯಾರಂಟಿಗಳ ಜಾರಿಯಿಂದ ಹಿಂದೆ ಸರಿದರೆ ರಸ್ತೆಗಳಲ್ಲೇ ಹೊಡೆಯಲು ಸಿದ್ಧರಾಗುತ್ತಿದ್ದಾರೆ ಎಂದು ಅಮಿತ್‌ ಮಾಳವೀಯಾ ಕುಟುಕಿದ್ದರು.

ಸೂಪರ್‌ ಸಿಎಂ ಪರಿಚಯಿಸಿದ್ದು ಬಿಜೆಪಿಯವರು!
ಅಮಿತ್‌ ಮಾಳವೀಯಾಗೆ ಟ್ವೀಟ್‌ನಲ್ಲಿಯೇ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ಖರ್ಗೆ, ಮತ್ತೆ ಸುಳ್ಳು ಇತಿಹಾಸ ಹೇಳಬೇಡಿ. ಸೂಪರ್‌ ಸಿಎಂ ವ್ಯಸವ್ಥೆ ಪರಿಚಯಿಸಿದ್ದು ನಿಮ್ಮ ಬಿಎಸ್‌ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಲ್ಲವೇ. ವಂಶಾಡಳಿತದ ಬಗ್ಗೆ ಮಾತನಾಡಲು ಬಯಸುವುದಾದರೆ, ಆ ಧೈರ್ಯ ತೋರುವುದೇ ಆದರೆ ಮೊದಲಿಗೆ ಅಮಿತ್‌ ಶಾ, ರಾಜನಾಥ ಸಿಂಗ್‌, ಧರ್ಮೇಂದ್ರ ಪ್ರಧಾನ್‌, ಅನುರಾಗ್‌ ಸಿಂಗ್‌ ಠಾಕೂರ್‌ ಇತರರನ್ನು ಕೇಳಿ ನಂತರ ನನ್ನ ಬಗ್ಗೆ ಮಾತನಾಡಿ’ ಎಂದು ತಿರುಗೇಟು ನೀಡಿದ್ದಾರೆ.

ನಾನು ನಿಮ್ಮಂತಲ್ಲ. ನಾನು ಚುನಾಯಿತ ಜನಪ್ರತಿನಿಧಿಯಾಗಿದ್ದು, ಕರ್ನಾಟಕ ಸರಕಾರದ ಸಚಿವನಾಗಿದ್ದೇನೆ. ನಾನು ನನ್ನ ಮಿತಿಯೊಳಗೆ ಮಾತನಾಡುತ್ತಿದ್ದೇನೆ. ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ನೀವು ಯಾವೆಲ್ಲಾ ಚುನಾವಣೆಗಳನ್ನು ಗೆದ್ದಿದ್ದೀರಿ? ಮೊದಲು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗೆದ್ದು ತೋರಿಸಿ. ಆ ಬಳಿಕ ಈ ರೀತಿ ಮಾತನಾಡಿ ಎಂದು ಪ್ರಿಯಾಂಕ್‌ ಖರ್ಗೆ ಅಮಿತ್‌ ಮಾಳವೀಯಾಗೆ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕ್‌ ಖರ್ಗೆಗೆ ಬಿಎಲ್‌ ಸಂತೋಷ್‌ ಟ್ವೀಟ್‌ ಬಾಣ!
ಪ್ರಿಯಾಂಕ್‌ ಖರ್ಗೆ ಟ್ವೀಟ್‌ಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌, ನಿಮ್ಮ ಪಕ್ಷದಿಂದ ಎರಡು ಅವಧಿಗೆ ಪ್ರಧಾನಿಯಾಗಿದ್ದವರು ಯಾವುದೇ ಚುನಾವಣೆ ಗೆದ್ದಿರಲಿಲ್ಲ. ಕೇವಲ ರಾಜ್ಯಸಭಾ ಸದಸ್ಯರಾಗಿದ್ದರು. ಮಾತನಾಡುವ ಮುನ್ನ ನಿಮ್ಮ ಹಿನ್ನೆಲೆ ನೋಡಿಕೊಳ್ಳಿ. ಚುನಾವಣೆ ಗೆಲ್ಲುವುದು, ಸಚಿವರಾಗುವುದು ಮನಬಂದಂತೆ ಮಾತನಾಡುವುದಕ್ಕಲ್ಲ. ಯಶಸ್ಸು ಹೆಚ್ಚು ಜವಾಬ್ದಾರಿಯನ್ನು ತಂದುಕೊಡುತ್ತದೆ ಎಂದು ಕಿಡಿಕಾರಿದ್ದಾರೆ.

error: Content is protected !!