ಹಾಸನ: ಅಧಿಕಾರಕ್ಕಾಗಿ JDS ಜೊತೆ ರಾಜಿಯಾಗಿ, ಅವರ ಮುಲಾಜಿಗೆ ಒಳಗಾಗಿ ಅವರು ಹೇಳಿದ್ದನ್ನೆಲ್ಲಾ, ಕೇಳುವಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಆಗ್ಲಿ, ನಾಯಕರಿಗಾಗಲಿ, ಸಂಘಟನೆಗಾಗಲಿ ಬರಬಾರದು ಎನ್ನುವುದು ನನ್ನ ದಿಟ್ಟ ನಿಲುವು ಎಂದು ಶಾಸಕ ಪ್ರೀತಂಗೌಡ ಸ್ವಪಕ್ಷದ ನಾಯಕರಿಗೇ ಕಿವಿಮಾತನ್ನು ಹೇಳಿದ್ರು. RSS ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿರುವ ವಿಚಾರಕ್ಕೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಪ್ರೀತಂಗೌಡ, RSS ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ. ದೇಶ ಕಟ್ಟುವುದೇ ತಪ್ಪು ಎನ್ನುವುದಾದ್ರೆ ಸಾರ್ವಜನಿಕರು ಯೋಚನೆ ಮಾಡಬೇಕಾದ ಸಮಯ ಇದು. ಇದರಲ್ಲಿ ಯಾರ್ಯಾರ ಮನಸ್ಥಿತಿ ಏನು ಎಂಬುದು ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ಪ್ರೀತಂಗೌಡ ಕಿಡಿ ಕಾರಿದ್ದಾರೆ.
ಈ ವೇಳೆ ಸಿಎಂ ಸೇರಿದಂತೆ ಸ್ವಪಕ್ಷದ ಹಲವು ನಾಯಕರು JDS ಜೊತೆ ಸಾಫ್ಟ್ ಕಾರ್ನರ್ ಹೊಂದಿರುವ ಬಗ್ಗೆಯೂ ವಿರೋಧಿಸಿದ ಪ್ರೀತಂಗೌಡ, BJP ಯಾವುದೋ ಒಂದು ಭಾಗದಲ್ಲಿ ಅಧಿಕಾರ ಹಿಡಿಯಲು ಸಾಫ್ಟ್ ಕಾರ್ನರ್ ತೋರಿಸಿದೆ. JDS ಅನ್ನು ರಾಜಕೀಯವಾಗಿ ಒಂದು ಮೈಲಿ, 1 ಕಿಲೋಮೀಟರ್, ಒಂದು ಮೀಟರ್ ದೂರ ಇಡಬೇಕು. ನಮ್ಮನ್ನು ಬಳಸಿಕೊಂಡು ಅವರ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎಂದು ಪ್ರೀತಂಗೌಡ ಆರೋಪಿಸಿದ್ರು.
ಕಲಬುರಗಿಯಲ್ಲಿ ಅಧಿಕಾರ ಹಿಡಿಯಲು ಅವರನ್ನು ಓಲೈಕೆ ಮಾಡಲು ಹೋದರೆ ನಮ್ಮ ಬುಡಕ್ಕೆ ಬರುತ್ತೆ. ಅಧಿಕಾರ ಹಿಡಿಯಲು ಐದಲ್ಲ ಹತ್ತು ವರ್ಷ ಕಾಯೋಣ. ನಮ್ಮ ರಾಜ್ಯ ನಾಯಕರು, ರಾಜ್ಯಾಧ್ಯಕ್ಷರು, ಮಂತ್ರಿಗಳು, ಮುಖ್ಯಮಂತ್ರಿಗಳು ಯಾವ್ಯಾವ ಸಂದರ್ಭದಲ್ಲಿ JDS ಬಗ್ಗೆ ಮೃದು ಧೋರಣೆ ತೋರಿದ್ರು. ಅವರಿಗೆ ಕುಮಾರಸ್ವಾಮಿ ಒಂದು ಸಂದೇಶ ನೀಡಿದ್ದಾರೆ ಎಂದ್ರು.
ಹಾಸನ ಮುನ್ಸಿಪಾಲಿಟಿ ಅಧಿಕಾರಕ್ಕೋಸ್ಕರ ನಾನು ಹೊಂದಾಣಿಕೆ ರಾಜಕೀಯ ಮಾಡಲ್ಲ. JDS ಅವರ ಮಿಷನ್ ಎಂದ್ರೆ BJP ಕಾಂಗ್ರೆಸ್ ನೂರರ ಮೇಲೆ ಬರಬಾರದು. ಆಗ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಅವರ ಗುಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬೇರೆಯವರು ಮಾತನಾಡಲ್ಲ, ಪ್ರೀತಂಗೌಡ ನೇರವಾಗಿ ಮಾತನಾಡುತ್ತಾನೆ ಎಂದು ಶಾಸಕರು ಕೆಂಡ ಕಾರಿದ್ದಾರೆ.