ಕೂಗು ನಿಮ್ಮದು ಧ್ವನಿ ನಮ್ಮದು

ನಾಳೆ ಬೆಳಗಾವಿಗೆ ಪ್ರಧಾನಿ ಮೋದಿ: ಕಾರ್ಯಕ್ರಮದ ಕಂಪ್ಲೀಟ್ ಡಿಟೇಲ್ಸ್

ಬೆಳಗಾವಿ: ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, 10 ಸಾವಿರ ಮಹಿಳೆಯರು ಪೇಟಾ ತೊಟ್ಟು ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಕುಂದಾನಗರಿಯಲ್ಲಿ ನಮೋ 8 ಕಿಮೀ ರೋಡ್ ಶೋ ನಡೆಸಲಿದ್ದು ರಸ್ತೆಯುದ್ದಕ್ಕೂ ಮಹಾಪುರುಷರ ಇತಿಹಾಸ ಸಾರುವ ಸಾಕ್ಷ್ಯ ಚಿತ್ರಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ನೃತ್ಯ ಕಲಾ ತಂಡಗಳು ಪ್ರಧಾನಿ ಸ್ವಾಗತಕ್ಕೆ ಸಜ್ಜಾಗಿವೆ. ನೂತನ ರೈಲ್ವೈ ನಿಲ್ದಾಣ ಲೋಕಾರ್ಪಣೆ ಸೇರಿದಂತೆ ಹಲವು ಯೋಜನೆಗಳಿಗೆ ನಮೋ ಚಾಲನೆ ನೀಡಲಿದ್ದಾರೆ.

ಹೌದು.. ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗಾವಿಗೆ ಭೇಟಿ ನೀಡಲಿದ್ದು ಇಡೀ ಕುಂದಾನಗರಿ ಬೆಳಗಾವಿ ಪ್ರಧಾನಿ ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಾಳೆ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ನಗರದ ಎಪಿಎಂಸಿಯ ಕೆ.ಎಸ್.ಆರ್.ಪಿ ಮೈದಾನಕ್ಕೆ ಬಂದಿಳಿಯಲಿದ್ದಾರೆ. ಬಳಿಕ ರಾಣಿ ಚೆನ್ನಮ್ಮ ವೃತ್ತ ಅಥವಾ ಸಂಭಾಜೀ ವೃತ್ತದಿಂದ ಸರಿಸುಮಾರು 8 ಕಿಮೀವರೆಗೂ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಸಂಚರಿಸುವ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ರೋಡ್ ಶೋ ನಡೆಯುವ ಮಾರ್ಗದುದ್ದಕ್ಕೂ ಕೇಸರಿ ಬಾವುಟಗಳ ಹಾರಾಟ ಜೋರಾಗಿದೆ. 10 ಸಾವಿರ ಮಹಿಳೆಯರು ಸಾಂಪ್ರದಾಯಿಕ ಉಡುಗೆಯೊಂದಿಗೆ ಪೇಟಾ ತೊಟ್ಟು ಪ್ರಧಾನಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ಇನ್ನೂ ಪ್ರಧಾನಿ ಸಂಚರಿಸುವ ಮಾರ್ಗದುದ್ದಕ್ಕೂ ಶಿವಾಜಿ ಮಹಾರಾಜ್, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ಮಹಾಪುರುಷರ ಇತಿಹಾಸ ಸಾರುವ ಹಾಗೂ ಸಾಂಪ್ರದಾಯಿಕ ನೃತ್ಯಗಳ ಲೈವ್ ಶೋ ಕೂಡ ನಡೆಯಲಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಭದ್ರತೆಗಾಗಿ ಸಾವಿರಕ್ಕೂ ಅಧಿಕ ಪೋಲಿಸರೊಂದಿಗೆ CRPF ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ರೋಡ್ ಶೋ ನಡೆಯುವ ಮಾರ್ಗ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು ಕೂಡ ಹಾಕಲಾಗಿದೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಉಂಟಾಗದಂತೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಇನ್ನೂ ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿದ್ದು, 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 50 ಎಕರೆ ಪ್ರದೇಶದಲ್ಲಿ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ನಾಳೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ದೇಶದ ರೈತರಿಗೆ 16 ಸಾವಿರ ಕೋಟಿ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ 1098 ಕೋಟಿ ವೆಚ್ಚದ ಜಲಜೀವನ ಮಿಷನ್ ಹಾಗೂ 1132 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಚಾಲನೆ ನೀಡಲಿರುವ ಪ್ರಧಾನಿ ಮೋದಿ, 190 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿರುವ ಬೆಳಗಾವಿ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಬೆಳಗಾವಿ- ಧಾರವಾಡ ನೇರ ರೈಲ್ವೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಭದ್ರತಾ ದೃಷ್ಟಿಯಿಂದ ಪ್ರಧಾನಿ ಕಾರ್ಯಕ್ರಮಕ್ಕೆ ಮೂರು ವಸ್ತುಗಳನ್ನು ನಿಷೇಧಿಸಿರುವ ಜಿಲ್ಲಾಡಳಿತ ಕೈಚೀಲ, ನೀರಿನ ಬಾಟಲಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ತರದಂತೆ ಆದೇಶಿಸಿದೆ.

ಒಟ್ಟನಲ್ಲಿ ಪ್ರಧಾನಿ ಮೋದಿ ಬೆಳಗಾವಿಗೆ ಆಗಮನದ ಹಿನ್ನೆಲೆಯಲ್ಲಿ ನಗರದ ಹಲವು ಮಾರ್ಗಗಳಲ್ಲಿ ಸಂಚಾರ ನಿಷೇಧಿಸಿರುವ ಪೋಲಿಸರು, ಬದಲಿ ಮಾರ್ಗವನ್ನು ಅನುಸರಿಸಿವಂತೆ ಸೂಚಿಸಿದ್ದಾರೆ. ಶಾಲಾ-ಕಾಲೇಜುಗಳ ವೇಳಾ ಪಟ್ಟಿಯಲ್ಲೂ ಹಲವು ಬದಲಾವಣೆ ಮಾಡಲಾಗಿದ್ದು, ಪ್ರಧಾನಿ ಮೋದಿ ಜೊತೆ ಸಿಎಂ ಬೊಮ್ಮಾಯಿ, ಸಚಿವರು, ಸಂಸದರು, ಸ್ಥಳೀಯ ಶಾಸಕರು ವೇದಿಕೆ ಹಂಚಿಕೊಳ್ಳಲಿದ್ದಾರೆ.

error: Content is protected !!