ಬೆಳಗಾವಿ: ಮೊದಲ ಬಾರಿಗೆ ಶಾಸಕಿಯಾಗಿ ಕಳೆದ 4 ವರ್ಷದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಇಡೀ ಕ್ಷೇತ್ರದಲ್ಲಿ ಜನರಿಗೆ ಖುಷಿ ಇದೆ. ಇದ್ದರೆ ಇಂತವರು ಶಾಸಕರಿರಬೇಕು ಎಂದು ಜನರು ನನ್ನ ಎದುರಷ್ಟೇ ಅಲ್ಲ, ಹಿಂದೆ ಕೂಡ ಮಾತನಾಡುತ್ತಿದ್ದಾರೆ. ಹಾಗಾಗಿ ನನಗೆ ನನ್ನ ಕೆಲಸ ಮತ್ತು ಕ್ಷೇತ್ರದ ಜನರ ಬಗ್ಗೆ ಹೆಮ್ಮೆ ಇದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೋಜಗಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ಮೇಲ್ಚಾವಣಿಗೆ (ಸ್ಲ್ಯಾಬ್) ಕಾಂಕ್ರೀಟ್ ಹಾಕುವ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಜನರು ನಮ್ಮ ಎದುರು ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ ಹಿಂದಿನಿಂದ ಯಾವ ರೀತಿಯ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ಮುಖ್ಯ. ಈ ವಿಷಯದಲ್ಲಿ ನಾನು ಧನ್ಯ. ಹಿಂದಿನಿಂದ ಕೂಡ ಜನರು ಅಷ್ಟೇ ವಿಶ್ವಾಸದಿಂದ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳ ಜೊತೆಗೆ, ಸದಾ ಜನರಿಗೆ ಲಭ್ಯವಿರುವ ಶಾಸಕಿ ನಾನು. ಜನರು ಹಿಂದೆಂದೂ ಕಾಣದಂತಹ ಅಭಿವೃದ್ಧಿಯನ್ನು ಕಂಡಿದ್ದರಿಂದ ಖುಷಿಯಿಂದಿದ್ದಾರೆ. ಜನರು ಖುಷಿಯಿಂದಿದ್ದರೆ ಅದಕ್ಕಿಂತ ಬೇರೆ ನಮಗೇನುಬೇಕು ಎಂದು ಹೆಬ್ಬಾಳಕರ್ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಜ್ಯೋತಿಭಾ ಬೆಳಗಾಂವ್ಕರ್, ಶಿವಾಜಿ ಯಳಗೆ, ರಾಹುಲ್ ಹೊನಗೆಕರ್, ಜಾಧವ್ ಸರ್, ರಾಜಶ್ರೀ ತೋರೆ, ಲಲಿತಾ ಪಾಟೀಲ, ಪದ್ಮರಾಜ ಪಾಟೀಲ, ಅಶೋಕ ಬಾಮಣೆ, ಹಿರಾಮಣಿ ಬಾಮಣೆ, ಬಾಹು ಅಣ್ಣ ತೀರಸೆ, ಮಾಧುರಿ ತೀರಸೆ ಹಾಗೂ ದೇವಸ್ಥಾನದ ಕಮೀಟಿಯರು ಉಪಸ್ಥಿತರಿದ್ದರು.