ಲಕ್ನೋ: ದೇಶದಲ್ಲೇ ಪ್ರಥಮ ಬಾರಿಗೆ ಉತ್ತರ ಪ್ರದೇಶದಲ್ಲಿ ಹಸುಗಳಿಗೆ ಅಂಬುಲೆನ್ಸ್ ಸೇವೆಯನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ರಾಜ್ಯದ ಪಶುಸಂಗೋಪನೆ, ಮೀನುಗಾರಿಕೆ, ಡೈರಿ ಅಭಿವೃದ್ಧಿ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ಈ ಯೋಜನೆ ಕುರಿತಾಗಿ ಮಾತನಾಡಿದ್ರು. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಸುಗಳಿಗೆ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಅಂಬುಲೆನ್ಸ್ ಸೇವೆಯನ್ನು ಜಾರಿಗೆ ತರುತ್ತಿದೆ ಎಂದು ಹೇಳಿದ್ರು.
ಪ್ರಾರಂಭಿಕ ಹಂತದಲ್ಲಿ ಈ ಯೋಜನೆಯಡಿ ೫೧೫ ಅಂಬುಲೆನ್ಸ್ ಕಾರ್ಯನಿರ್ವಹಣೆ ಮಾಡಲಿದ್ದು, ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಯೋಜನೆ ಜಾರಿಗೊಳ್ಳುತ್ತಿದೆ. ೧೧೨ ತುರ್ತು ಸೇವೆ ನಂಬರ್ ನಂತೆಯೇ ಈ ಸೇವೆಯೂ ಕಾರ್ಯನಿರ್ವಹಣೆ ಮಾಡಲಿದ್ದು, ತೀವ್ರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಸುಗಳು ಬೇಗ ಚೇತರಿಸಿಕೊಳ್ಳುವುದಕ್ಕೆ ತ್ವರಿತವಾದ ಚಿಕಿತ್ಸೆ ಲಭ್ಯವಾಗಲು ಈ ಯೋಜನೆ ಸಹಕಾರಿಯಾಗಿದೆ ಎಂದು ತಿಳಿಸಿದ್ರು.
ಡಿಸೆಂಬರ್‌ನಲ್ಲಿ ಇದಕ್ಕಾಗಿ ಪ್ರತ್ಯೇಕವಾದ ಕಾಲ್ ಸೆಂಟರ್ ಪ್ರಾರಂಭವಾಗಲಿದ್ದು, ಕರೆ ಮಾಡಿದ ೧೫ ರಿಂದ ೨೦ ನಿಮಿಷಗಳಲ್ಲಿ ಅಂಬುಲೆನ್ಸ್ ನಿಗದಿತ ಸ್ಥಳಕ್ಕೆ ಆಗಮಿಸಲಿದೆ ಎಂದ್ರು.
ಇದೆ ಸಮಯದಲ್ಲಿ ಉತ್ತಮ ಗುಣಮಟ್ಟದ ವೀರ್ಯ ಮತ್ತು ಭ್ರೂಣ ಕಸಿ ತಂತ್ರಜ್ಞಾನದ ಮೂಲಕ ರಾಜ್ಯದಲ್ಲಿ ತಳಿ ಸುಧಾರಣೆ, ಅಭಿವೃದ್ಧಿ ಯೋಜನೆಗೂ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ರು.
ಭ್ರೂಣ ಕಸಿ ತಂತ್ರಜ್ಞಾನವು ರಾಜ್ಯದಲ್ಲಿ ಕ್ರಾಂತಿ ಮಾಡಲಿದೆ. ಹಸುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುವಂತೆ ಮಾಡಲಿದೆ. ವಯಸ್ಸಾದ ಹಸುಗಳು ಅಧಿಕ ಹಾಲು ಕೊಡಲಾರಂಭಿಸಿದ್ರೆ ಸಾಕುವವರು ಅವುಗಳನ್ನು ಬೀದಿಗೆ ಬಿಡುವುದಿಲ್ಲ. ಇದರಿಂದ ಬಿಡಾದಿ ಹಸುಗಳ ಸಮಸ್ಯೆಯೂ ತಾನಾಗಿಯೇ ನಿಲ್ಲುತ್ತದೆ. ಯೋಗಿ ಆದಿತ್ಯನಾಥ ನೇತೃತ್ವದ ಸಕಾರದವು ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಬಿಡಾಡಿ ದನಗಳಿಗೆ ಆಶ್ರಯ ಕಲ್ಪಿಸಲು ಅನುದಾನ ನೀಡುತ್ತಿದೆ. ಈ ಹಿಂದಿನ ಯಾವುದೇ ಸರ್ಕಾರವು ಇಂತಹ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು.