ಹುಬ್ಬಳ್ಳಿ: ಬಜೆಟ್ ನಲ್ಲಿ ನೀಡಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯ ಇರುವ ಎಲ್ಲಾ ಕಾರ್ಯಾದೇಶಗಳನ್ನು ಏ.30 ರೊಳಗೆ ನೀಡುತ್ತೇನೆ. ಅನುಷ್ಠಾನಕ್ಕೆ ರಚಿಸಿರುವ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಮಾ.28 ರಂದು ಆದೇಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ಹುಬ್ಬಳ್ಳಿಯ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮುಖ್ಯವಾದ ಕೆಲಸಗಳ ಪೈಕಿ ಅಂತಾರಾಜ್ಯ ಜಲವಿವಾದಗಳನ್ನು ಶೀಘ್ರದಲ್ಲಿ ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ. ಕಾನೂನಾತ್ಮಕ ವಿಚಾರಗಳನ್ನು ಜಲವಿವಾದ ನೇತೃತ್ವ ವಹಿಸಿರುವ ನ್ಯಾಯವಾದಿಗಳ ಜೊತೆ ಚರ್ಚಿಸಲಾಗುವುದು. ಅನುಷ್ಠಾನಕ್ಕೆ ಅಗತ್ಯವಿರುವ ಅನುಮತಿಗಳನ್ನು ಕೇಂದ್ರದಿಂದ ಪಡೆದುಕೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದೇನೆ. ಏಪ್ರಿಲ್ ಮೊದಲ ವಾರದಲ್ಲೇ ಕೇಂದ್ರ ಸಚಿವರನ್ನು ಭೇಟಿಯಾಗಿ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಈ ಕೆಲಸವನ್ನು ಮುಂದುವರೆಸುತ್ತೇನೆ ಎಂದು ತಿಳಿಸಿದರು. ಅಂತಾರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮೊದಲು ನಾನು ಕೇಂದ್ರ ಸಚಿವರ ಜೊತೆಗೆ ಚರ್ಚೆ ಮಾಡುತ್ತೇನೆ. ಅವಶ್ಯಬಿದ್ದರೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು ಎಂದು ಸಿಎಂ ಹೇಳಿದರು.
ಹಿಜಾಬ್ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ನಲ್ಲಿ ಸಮವಸ್ತ್ರದ ಬಗ್ಗೆ ಏನೂ ತೀರ್ಮಾನವಾಗಿದೆಯೋ ಅದೇ ಅಂತಿಮ. ಅದರ ನಂತರದ ಯಾವುದೇ ಮಾತುಗಳು ಅವಶ್ಯಕತೆಯಿಲ್ಲ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಸ್ಎಸ್ಎಲ್ ಸಿ ಪರೀಕ್ಷೆಗೆ ಬೇಕಾದ ಅಗತ್ಯ ಸಿದ್ದತೆಗಳನ್ನು ಶಿಕ್ಷಣ ಹಾಗೂ ಗೃಹ ಇಲಾಖೆ ಮಾಡಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸರಳ ಪರೀಕ್ಷೆ ಮಾಡಬೇಕು ಎಂದುಕೊಂಡಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಧೈರ್ಯವಾಗಿ ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅಭಿವೃದ್ಧಿಗೆ ಕಾಲ ಬಂದಿದೆ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3000 ಕೋಟಿ ರೂ. ನೀಡಿದ್ದೇನೆ. ಆದರೆ ಪ್ರತಿ ಬಾರಿಯೂ ಯೋಜನಾ ಮಂಜೂರಾತಿಗೆ ವಿಳಂಬವಾಗುತ್ತಿದೆ. ಈ ವರ್ಷ 1400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನೆನಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವುದು. ಅಭಿವೃದ್ಧಿ ಕಾಲ ಬಂದಿದೆ. ಕೋವಿಡ್ ನಿಂದ ಹೊರ ಬಂದಿದ್ದೇವೆ. ಯೋಜನಾಬದ್ಧವಾದ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.