ಇಲ್ಲ, ನನ್ನ ಮಗ ಸತ್ತಿಲ್ಲ, ಈ ಸುದ್ದಿಯನ್ನು ನಾನು ನಂಬುವುದಿಲ್ಲ, ಹತಾಶನಾಗುವುದಿಲ್ಲ” ಎಂಬ ದೃಢನಿರ್ಧಾರದಿಂದ ಆ ತಂದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುಮಾರು 230 ಕಿ.ಮೀ ಓಡಾಡಿದ. ಕೊನೆಗೂ ತಾತ್ಕಾಲಿಕ ಶವಾಗಾರವೊಂದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮಗನನ್ನು ಕಂಡ. ಸಾವಿಗೆ ತುತ್ತಾಗದೇ ಜೀವ ಹಿಡಿದುಕೊಂಡಿದ್ದ ಮಗನನ್ನು ಅಕ್ಷರಶಃ ಸಾವಿನ ಬಾಯಿಂದ ಬಿಡಿಸಿಕೊಡು ಬಂದ; ಬಂಗಾಲದ ಈ ತಂದೆಯ ಸಾಹಸದ ಕತೆ ಕೇಳಿದ ಜನ ದಂಗಾಗಿದ್ದಾರೆ. ನಿಜಕ್ಕೂ ವಾಸ್ತವ ಕಲ್ಪನೆಯನ್ನೂ ಮೀರಿ ವಿಚಿತ್ರವಾದುದು ಎಂದು ಉದ್ಗರಿಸಿದ್ದಾರೆ.
ಇತ್ತೀಚೆಗೆ ಒಡಿಶಾದಲ್ಲಿ ಆದ ರೈಲು ದುರ್ಘಟನೆ ಇಡೀ ದೇಶವನ್ನೇ ನಡುಗಿಸಿದೆ. ಅಪಘಾತದ ಹಾಗೂ ಅದರ ನಂತರದ ಘೋರ ನೋಟಗಳು ನಮ್ಮೆಲ್ಲರ ಮನದಾಳದಲ್ಲಿ ಬೇರೂರಿ ಮನಃಪಟಲದಲ್ಲಿ ಮೂಡುತ್ತ ಇನ್ನೂ ಕಾಡುತ್ತಿವೆ. ಇದು ಮರೆಯಲಾಗದ್ದು, ಮರೆಯಬಾರದ್ದು. ಇಂಥ ತೀವ್ರ ಹತಾಶೆಯ ಸಂದರ್ಭದಲ್ಲಿ ಈ ತಂದೆ ಮತ್ತು ಮಗನ ಸುದ್ದಿ ತುಸುವಾದರೂ ಜೀವನಪ್ರೀತಿ ಹಾಗೂ ಮರುಭರವಸೆಯನ್ನು ಹುಟ್ಟಿಸಿದೆ.
ಹೌರಾದಲ್ಲಿ ಅಂಗಡಿಯೊಂದನ್ನು ನಡೆಸುತ್ತಿರುವ ಹೆಲಾರಾಮ್ ಮಲಿಕ್ ಕಳೆದ ಶುಕ್ರವಾರ ಶಾಲಿಮಾರ್ ನಿಲ್ದಾಣದಲ್ಲಿ ತಮ್ಮ 24 ವರ್ಷದ ಮಗನನ್ನು ಬೀಳ್ಕೊಟ್ಟು ಬಂದ ಕೆಲವು ಗಂಟೆಗಳ ನಂತರ ರೈಲು ಅಪಘಾತದ ಸುದ್ದಿ ಗೊತ್ತಾಗಿದೆ. ಮಗನಿಗೆ ಫೋನ್ ಮಾಡಿದರೆ ಗಾಯಗೊಂಡ ಮಗನಿಂದ ಕ್ಷೀಣ ದನಿಯಲ್ಲಿ ಉತ್ತರ. ಒಂದು ಕ್ಷಣವೂ ತಡಮಾಡದೆ ಪರಿಚಯದ ಆ್ಯಬುಲೆನ್ಸ್ ಚಾಲಕ ಹಾಗೂ ಇನ್ನೊಬ್ಬನೊಂದಿಗೆ ಬಾಲಾಸೋರ್ನತ್ತ ರಾತೋರಾತ್ರಿ ಪ್ರಯಾಣ ಬೆಳಿಸಿ, ಪ್ರತಿ ಆಸ್ಪತ್ರೆಯನ್ನೂ ಜಾಲಾಡಿ, ಎದುರಾದ ಪ್ರತಿಯೊಬ್ಬರನ್ನೂ ವಿಚಾರಿಸಿದ್ದಾರೆ.
ಆಸ್ಪತ್ರೆಯಲ್ಲಿಲ್ಲದಿದ್ದರೆ ಬಹುತೇಕ ಸತ್ತಿರಬೇಕು, ಹತ್ತಿರದ ಹೈಸ್ಕೂಲಿಗೆ ಹೋಗಿ, ಅಲ್ಲಿ ದೇಹಗಳನ್ನು ಇರಿಸಿದ್ದಾರೆ, ಎಂಬ ಉತ್ತರ ಬಂದಾಗ ಅದನ್ನು ನಂಬದಿದ್ದರೂ ಆ ತಾತ್ಕಾಲಿಕ ಶವಾಗಾರಕ್ಕೆ ಹೋಗಿದ್ದಾರೆ. ಅಲ್ಲಿನ ದೇಹಗಳನ್ನು ನೋಡಲೂ ಅವಕಾಶವಿರಲಿಲ್ಲ. ಆ ಗದ್ದಲದ ನಡುವೆ ಆಕಸ್ಮಿಕವಾಗಿ ಒಬ್ಬರು ಅಲ್ಲಿದ್ದ ಒಂದು ದೇಹದ ಕೈ ನಡುಗುತ್ತಿದ್ದುದನ್ನು ಗಮನಕ್ಕೆ ತಂದರು. ಕೂಡಲೇ ಅದು ಮಗ ಬಿಸ್ವಜಿತ್ ಕೈ ಎಂದು ಗೊತ್ತಾಗಿ ಅವನನ್ನು ಅಲ್ಲಿಂದ ಸಾಗಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ನಂಬಲಸಾಧ್ಯ ಘಟನೆ ಜನರಲ್ಲಿ ಆಘಾತ ಮೂಡಿಸಿದೆ. “ಅಪಘಾತಕ್ಕೆ ಈಡಾದವರನ್ನು ಗಾಯಗೊಂಡವರು, ಸತ್ತವರು ಎಂದು ವಿಂಗಡಿಸುವವರು ಯಾರು? ವೈದ್ಯರೋ ತರಬೇತಿಯಿಲ್ಲದ ಸಾಮಾನ್ಯರೊ?” “ಟ್ರಕ್ಕುಗಳಲ್ಲಿ ದೇಹಗಳನ್ನು ಎಸೆಯುತ್ತಿದ್ದ ರೀತಿ ನೋಡಿದರೆ ಅದರಲ್ಲಿ ಕೆಲವರಾದರೂ ಜೀವ ಹಿಡಿದುಕೊಂಡಿರುವ ಸಾಧ್ಯತೆ ಇದೆ. ಇದಕ್ಕೆ ಯಾರು ಹೊಣೆ?” ಈ ಇಡೀ ಘಟನೆ ನಮ್ಮನ್ನು ಆಳವಾಗಿ ತಟ್ಟಬೇಕಾದ್ದಂತೂ ನಿಜ