ಕೂಗು ನಿಮ್ಮದು ಧ್ವನಿ ನಮ್ಮದು

ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರ ಸ್ವೀಕಾರ

ಬೆಳಗಾವಿ: ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗುರುವಾರ (ಮೇ 5) ಸಂಜೆ ಅಧಿಕಾರವನ್ನು ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರವನ್ನು ಹಸ್ತಾಂತರಿಸಿ ಶುಭ ಕೋರಿದರು.

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನವರಾದ ನಿತೇಶ್ ಪಾಟೀಲ ಅವರು ಇದಕ್ಕೂ ಮುಂಚೆ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಸಿ.ಬಿ.ಕೊಡ್ಲಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೂಲತಃ ಬೆಳಗಾವಿ ಜಿಲ್ಲೆಯವರೇ ಆಗಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಕೆ.ಆರ್.ಐ.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸರಕಾರ ವರ್ಗಾವಣೆಗೊಳಿಸಿದೆ.

ನೂತನ ಜಿಲ್ಲಾಧಿಕಾರಿ ಪರಿಚಯ:

ನಿತೇಶ್ ಪಾಟೀಲ ಅವರು ಮೂಲತ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಕೆರೂಟಗಿ ಗ್ರಾಮದವರು. ಎಸ್‍ಎಸ್‍ಎಲ್‍ಸಿ ವರೆಗೆ ವಿಜಯಪುರದಲ್ಲಿ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪಿಯುಸಿ, ಬಳಿಕ ಎನ್‍ಆಯ್‍ಟಿ ಅಲಹಾಬಾದ್‍ನಲ್ಲಿ ಬಿಇ (ಕಂಪ್ಯೂಟರ್ ಸೈನ್ಸ್) ಪದವಿ ಪಡೆದರು. ಕೆಲಕಾಲ ಸಾಫ್ಟವೇರ್ ಇಂಜಿನೀಯರ್ ಆಗಿ ಸೇವೆ ಸಲ್ಲಿಸಿದ ಬಳಿಕ 2012ರಲ್ಲಿ ಯುಪಿಎಸ್‍ಸಿ ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು. ಪ್ರೊಬೇಷನರಿ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ತಹಶೀಲ್ದಾರರಾಗಿ ನಂತರ ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ.


error: Content is protected !!