ಕೂಗು ನಿಮ್ಮದು ಧ್ವನಿ ನಮ್ಮದು

ನೀರಜ್ ಚೋಪ್ರಾನ ಎಸೆತಕ್ಕೆ ಚಿನ್ನ ಛಿದ್ರ: ಬೊಜ್ಜಿನ ಕಾರಣಕ್ಕೆ ಭರ್ಜಿ ಎಸೆದೆವನು, ಭರತ ಖಂಡದ ಚಿನ್ನದ ಮಗ

?ರಮಾಕಾಂತ್ ಆರ್ಯನ್

ನಿಮ್ಮ ಮಗ ತುಂಬ ಬೊಜ್ಜಿನಿಂದ ಬೆಳೆದಿದ್ದರೆ ಅವನನ್ನ ಡುಮ್ಮ ಎನ್ನಬೇಡಿ, ನಿಂದಿಸಬೇಡಿ, ಕುಗ್ಗಿಸಬೇಡಿ.. ಯಾರಿಗೆ ಗೊತ್ತು ಮುಂದೊಂದು ದಿನ ಅವನು ಚಿನ್ನ ಗೆಲ್ಲುವ ನೀರಜ್ ಚೋಪ್ರಾ ಆದ್ರೂ ಆದಾನು!

ನೀರಜ್ ಚೋಪ್ರಾ ಎಂಬ ಪಾಣೀಪಟ್ ನ ರಣಭೂಮಿಯಲ್ಲಿ ಹುಟ್ಟಿದ ಹುಡುಗ, ಅಂದೇ ಒಲಿಂಪಿಕ್ ಚಿನ್ನದ ಭರ್ಜಿಯ ಮೇಲೆ ತನ್ನ ಹೆಸರು ಬರೆಸಿದ್ದನಾ? ಗೊತ್ತಿಲ್ಲ.‌ ನಂಬಿ ಖಾಂಡ್ರಾದ ರೈತನ ಮನೆಯಲ್ಲಿ ಹುಟ್ಟಿದ ನೀರಜ್ ಎಂಬ ಹುಡುಗ ಕೇವಲ 11 ವಯಸ್ಸಿಗೆ 85 kilo ತೂಗುತ್ತಿದ್ದ. 12 ನೆಯ ವಯಸ್ಸಿಗೆ 90 Kilo. ಒಂಥರಾ ಸುಮೋ ಕುಸ್ತಿಪಟುವಿನ ಹಾಗೆ. ನೋಡಿದವರು ಕಡಿಮೆ ಮೂದಲಿಸಿದ್ದರಾ? ಹೆತ್ತ ತಾಯಿ, ಅದೆಂಥ ವಿಚಿತ್ರ ಸಂಕಟಕ್ಕೆ ಬಿದ್ದಿರಬೇಡ. ಇವತ್ತು ಅದೇ ಬೊಜ್ಜಿನ ಹುಡುಗನ ಸಮಕ್ಕೆ ಇಡೀ ಭೂಲೋಕದಲ್ಲಿ ಜಾವೆಲಿನ್ ಎಸೆಯುವ ಇನ್ನೊಬ್ಬ ಭೂಪ ಹುಟ್ಟಿಲ್ಲ. ಎಂಥಾ ಆಶ್ಚರ್ಯ ಅಲ್ಲವಾ! ಬೊಜ್ಜಿನ ಹುಡುಗ ಭರ್ಜಿ ಹಿಡಿದ ಕಥೆ ತುಂಬಾನೇ ಇಂಟರೆಸ್ಟಿಂಗ್

ತೂಕ ಕಳೆದುಕೊಳ್ಳುವ ಸಲುವಾಗಿ ಅವನು ಪಾಣಿಪಟ್ ಸ್ಟೇಡಿಯಂಗೆ ಹೆಜ್ಜೆ ಇಟ್ಟ. ಅದರೆ ಅವನು ಈಗ ಇಡೀ ದೇಶಕ್ಕೆ ಬಂಗಾರದ ತೂಕದ ಮಗ! ನಿಮ್ಮನ್ನ ಒಂದು ವಿಚಿತ್ರ ಅವಮಾನ ಮತ್ತೆ ಮತ್ತೆ ಮೂಲೆಗೆ ದೂಡದ ಹೊರತು ನೀವು ಏನೂ ಆಗಲಾರಿರಿ, ಅಲ್ಲವಾ? ಅವಮಾನ ಮನುಷ್ಯನನ್ನ ಸಂಕಟದ ಮೂಲೆಯಿಂದ ಜಿಗಿದೆದ್ದು ಬಿಡುವಂತೆ ಮಾಡುತ್ತದೆ. ಮನುಷ್ಯರೇ ಹಾಗೆ, ನಿಮ್ಮ ಬಗ್ಗೆ ಮಾತನಾಡುವುದಕ್ಕೆ ಏನೂ ಇಲ್ಲದಿದ್ದರೆ, ಏನಾದರೂ ಒಂದು ಹುಡುಕಿಬಿಡುತ್ತಾರೆ. ಕನಿಷ್ಟ ನಿಮ್ಮ ಕೂದಲು, ಮೂಗು, ಬಣ್ಣ, ಬಟ್ಟೆ, ಉದ್ದ, ಅಗಲ, ಯಾವ ನ್ಯೂನತೆ ಸಿಕ್ಕರೂ ಮಾತನಾಡಿಬಿಡುತ್ತಾರೆ. ನೀರಜ್ ಬಗ್ಗೆಯೂ ಹಾಗೆ! ಪಾಪ ಹುಡುಗ, ಅದೆಷ್ಟು ಅವಮಾನ ಅನುಭವಿಸಿದ್ದನೋ? ಅವನೇ ಬಲ್ಲ! ಪುಟ್ಟ ಪುಟ್ಟ ಸ್ಥಳಗಳಿಂದ ಬಂದ ಹುಡುಗರನ್ನ ಕುಗ್ಗಿಸಲು ಸಾವಿರ‌ ಕಾರಣಗಳಿರುತ್ತವೆ. ಆದರೆ ಗೆಲ್ಲಲು ಒಂದೇ ಕಾರಣ, ಅದರ ಹೆಸರು ಛಲ! ಅವಮಾನ ಮಾಡಿದವರ ಎದುರಿಗೆ ಗೆದ್ದು ತೋರಿಸಬೇಕೆಂದು ಎದ್ದು ನಿಂತವನು ನೀರಜ್ ಚೋಪ್ರಾ! ಕೇವಲ ತೂಕ ಇಳಿಸಿಕೊಂಡರೇ ಸಾಕಪ್ಪ ಭಗವಂತಾ ಎಂದು ಶಿವಾಜಿ ಸ್ಟೇಡಿಯಂನಲ್ಲಿ ಓಡುತ್ತಿದ್ದ ಹುಡುಗ, ಜಾವೆಲಿನ್ ಥ್ರೋ ಪಟು ಜೈ ಚೌಧರಿ ಕಣ್ಣಿಗೆ ಬಿದ್ದುಬಿಡುತ್ತಾನೆ. ಬದುಕಿನ ತಿರುವಿನಲ್ಲಿ ಬಂಗಾರವರ್ಣದ ಭಗವಂತ ಹಾಗೆ ನಿಂತಿರುತ್ತಾನೆ. ಕೈ ಮುಗಿದು ಆಶೀರ್ವಾದ ಕೇಳಬೇಕಷ್ಟೇ! ಬಾರೋ ಇಲ್ಲಿ, ಈ ಜಾವೆಲಿನ್ ಎಸೆಯೋ ನೋಡೋಣಾ ಎಂದು ಬಿಡುತ್ತಾರೆ. ನೀರಜ್, ಮೊದಲ ಅಟೆಂಪ್ಟ್ ಗೆ ಎಷ್ಟು ದೂರ ಎಸೆದ ಗೊತ್ತಾ? ಭರ್ತಿ 40 Meter! ಒಬ್ಬ ಫರ್ಸ್ಟ್ ಟೈಮರ್ ಆ ಮಟ್ಟಿಗೆ ಜಾವೆಲಿನ್‌ ಎಸೆಯಲಾರ! Beginners luck! ಬಹುಶಃ ಅವನ ಏಜ್ಗೆ ಅವತ್ತೇ ಅಲ್ಲಿ ತೀರ್ಪುಗಾರನಿದ್ದಿದ್ದರೆ ಅವನು ಆ ಕ್ಷಣವೇ ನ್ಯಾಷನಲ್ ಚಾಂಪಿಯನ್! ಜೈ ಚೌಧರಿಗೆ ಮಾತೇ ಹೊರಡಲ್ಲ. ನೀರಜ್ ಡುಮ್ಮಗಿದ್ದ ನಿಜ, ಆದರೆ ಅವನ ಫ್ಲೆಕ್ಸಿಬಿಲಿಟಿ ಇತ್ತಲ್ಲ, ಅದು ಜಾವೆಲಿನ್ ಪಟುವಿಗೆ ಸಿಗುವ ವರ.

ಅವನ‌ ಫ್ಲೆಕ್ಸಿಬಿಲಿಟಿಗೆ Javellin throw ಕೂಗಿ ಕರೆದಿತ್ತು. ಅದಷ್ಟೇ ಅಲ್ಲ. ಜಾವೆಲಿನ್ ಥ್ರೋ ಎಂಬುದು ಬಾಹುಬಲದಿಂದ ಡಿಸೈಡ್ ಆಗೋ ವಿಷಯವಲ್ಲ. ಅದು ಒಂದು ಆ್ಯಂಗಲ್ ನಲ್ಲಿ ಓಡಿ ಬಂದು ಫಿನಿಷಿಂಗ್ ಲೈನ್ ವರೆಗೂ ಬಿದ್ದೇ ಬಿಡುವಂತೆ ಓಡಿ ಬಂದು, ನೆಲದ ಧೂಳೆಲ್ಲಾ ಎದ್ದುಬಿಡುವಂತೆ ಉಸಿರು ಬಿಟ್ಟು, ಗಾಳಿಯಲ್ಲಿ ಭರ್ಜಿಯನ್ನ ಆಕಾಶವೇ ಛಿದ್ರವಾಗುವಂತೆ, ತೇಲಿಬಿಡುವ ಅದ್ಭುತ ಕಲೆ. ಇದು ಬರೀ ಬಾಹುಬಲಿಗಳಿಗೂ ಒಲಿಯಲ್ಲ, ಉಸಿರುಗಟ್ಟಿಸುವ ಬಾಡಿ ಬಿಲ್ಡರ್ ಗಳಿಗೂ ದಕ್ಕಲ್ಲ, ಅದು ಎಲ್ಲವುಗಳ ಕಾಂಬಿನೇಷನ್. ಅಂತಹ ಕಾಂಬಿನೇಷನ್ ಗೆ ವಿಶ್ವದಲ್ಲಿ ಹೊಸ ಹೆಸರು ನೀರಜ್ ಚೋಪ್ರಾ! ಒಂಥರಾ ಗ್ರೀಕ್ ಗಾಡ್ ನಂತ ಫಿಸಿಕ್! ಸ್ಪುರದ್ರೂಪಿ, ಬಲಶಾಲಿ, ನೀಳ ಕೂದಲು, ತೀಕ್ಷ್ಣ ನೋಟ, ದಿಟ್ಟ‌ನಿಲುವು.. ಎಲ್ಲವೂ! ಅಂದೇ ನಿರ್ಧಾರ ಮಾಡಿದಂತೆ ಜಾವೆಲಿನ್ ಕೈಗೆತ್ತಿಕೊಂಡ ನೀರಜ್! ಉಳಿದದ್ದು ಬಂಗಾರದಂಥ ಇತಿಹಾಸ ಮಾತ್ರ! ಮೊದ‌ಮೊದಲು ಕ್ರೀಡಾಪಟುವಿನಂತೆ ಕಂಡರೆ ಸಾಕು ಎಂದು ಆಡುತ್ತಿದ್ದ ನೀರಜ್, ಆಮೇಲೆ ದಾಖಲೆ ಮಾಡಬೇಕೆಂದು ಆಡಲು ಶುರು ಮಾಡುತ್ತಾನೆ.

Fortunes Favours the Brave! ಇದೇ ನೀರಜ್, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಬೇಟೆಯಾಡುತ್ತಾನೆ. ಅವನು ಎಸೆದ 88.06 ಮೀಟರ್ ದೂರ, ಭಾರತದ ದಾಖಲೆ. ಈಗವನು ವಿಶ್ವದಾಖಲೆ ವೀರ. 2021 ರಲ್ಲಿ ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಫ್ರೀ ನಲ್ಲಿ ನೀರಜ್, ಅವನದ್ದೇ ದಾಖಲೆ ಪುಡಿಗಟ್ಟಿದ್ದ. ಎಸೆದ ದೂರ 88.07 Meter. ನೀರಜ್ ಬಗ್ಗೆ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಹೇಳಲೇ ಬೇಕು. ಪದಕ ಗೆಲ್ಲೋದಕ್ಕೆ ಎಲ್ಲರೂ ಆಡಿದರೆ, ನೀರಜ್ near perfection throw ಗಾಗಿ ಆಡುತ್ತಾನೆ.‌ ಎಸೆತ ಎಷ್ಟು ಪರ್ಫೆಕ್ಟಾಗುತ್ತದೋ ಅಷ್ಟೂ ಸಂಭ್ರಮಿಸುತ್ತಾನೆ. ಪದಕಗಳು ಔಪಚಾರಿಕ ಮಾತ್ರ. ಅದು ಪರ್ಫೆಕ್ಷನ್ ಗೆ ಮಾತ್ರ ಆಡುವವರ ತಾಕತ್ತು. ಈ ಒಲಿಂಪಿಕ್ಗೆ ಅವನು ತಯಾರಾಗಿದ್ದು ಒಲಿಂಪಿಕ್ ಟ್ರೈನಿಂಗ್ ಸೆಂಟರ್ ನ ಆಸ್ಟ್ರೇಲಿಯಾ ಕೋಚ್ Garry Calvert ಗರಡಿಯಲ್ಲಿ. ಅಭಿನವ್ ಬಿಂದ್ರಾ 2008 ರಲ್ಲಿ ಒಲಿಂಪಿಕ್ ಚಿನ್ನಕ್ಕೆ ಗುರಿ ಇಟ್ಟಿದ್ದೇ ಕೊನೆ. ಆಮೇಲೆ ಇನ್ನೊಂದು ಚಿನ್ನ ಸಿಕ್ಕಿರಲಿಲ್ಲ. ಈಗ ಆ ಬರವನ್ನ ನೀರಜ್ ನೀಗಿದ್ದಾನೆ. ಅವನ ತೋಳ್ಬಲಕ್ಕೆ ಜಾವೆಲಿನ್ ಹಾರಿದ್ದು 87.58 Meter! ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ಅಥ್ಲೆಟಿಕ್ಸ್ ನಲ್ಲಿ ಇದು ಮೊಟ್ಟ ಮೊದಲ ಚಿನ್ನ ಎಂದರೆ ನೀವು ನಂಬಲೇ ಬೇಕು.. ಇದು ವಿಶ್ವಕ್ಕೆ ಒಂದು ಅಳತೆಗೋಲೆಂಬ Feeling, ಭಾರತಕ್ಕೆ ಮತ್ತು ನೀರಜ್ ಗೆ ಅದೊಂದು Emotion ಮತ್ತದು ವಿರಳಾತಿವಿರಳ.

error: Content is protected !!