ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಬಿಟ್ಟು ಎಲ್ಲೂ ಹೋಗುವ ಪ್ರಶ್ನೆಯೇ ಇಲ್ಲ. ಅವರ ಪರವಾಗಿ ನಾನು ಮಾತು ಕೊಡುತ್ತಿದ್ದೇನೆ. ಅವರು ಈ ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧೆಮಾಡುವುದಿಲ್ಲಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಹರೂರು ಗ್ರಾಮದಲ್ಲಿ ನಡೆದ ಬೇವೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ನೀವು ಸ್ಪರ್ಧೆ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಎಂದು ಕಾರ‍್ಯಕರ್ತರು ಒತ್ತಾಯ ಮಾಡಿದ್ದಕ್ಕೆ ಅವರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದರು. ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಇಂತಹ ಸಮಯದಲ್ಲಿ ಯಾಕೆ ಬೇರೆ ಕಡೆಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.
1,500 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿ ಕೆಲಸ
ಕಳೆದ ಬಾರಿ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಬರದೇ ಇದ್ದರೂ ನೀವೇ ಅವರ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ದೀರಿ. ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದ ಮೇಲೆ 1,500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. 14 ತಿಂಗಳ ಸರಕಾರದಲ್ಲಿ ರೈತರ ಸಾಲ ಮನ್ನಾ ಮಾಡಿ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಕಾರ‍್ಯಕರ್ತರು ನಾವೇ ಕುಮಾರಣ್ಣ ಎಂದು ಭಾವಿಸಿ ಕೆಲಸ ಮಾಡಿ. ಮತದಾರರ ಮನೆಗೆ ಹೋಗಿ ಕುಮಾರಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕೆಲಸ, ಮುಂದೆ ಮಾಡಲಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ ಕುಮಾರಸ್ವಾಮಿ ಅವರ ಗೆಲುವಿಗೆ ಶ್ರಮಿಸಿ ಎಂದು ಕರೆ ನೀಡಿದರು.
ಯೋಗೇಶ್ವರ್ ವಿರುದ್ಧ ವಾಗ್ದಾಳಿ
ಈ ಕ್ಷೇತ್ರದ ಮಾಜಿ ಶಾಸಕರು ಹತಾಶರಾಗಿದ್ದಾರೆ. ಅವರ ಹತಾಶೆ ವೈರಲ್ ಆಗಿರುವ ಆಡಿಯೊದಿಂದ ಸ್ಪಷ್ಟವಾಗುತ್ತದೆ. ಮಾಜಿ ಶಾಸಕರಿಗೆ ಸೋಲಿನ ಮುನ್ಸೂಚನೆ ದೊರೆತಿದ್ದು, ವೈರಲ್ ಆಗಿರುವ ಆಡಿಯೊದಲ್ಲಿಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ರೈತರ ಪರವಾಗಿ ನನ್ನ ತಂದೆ ಆಡಳಿತ ನೀಡುತ್ತಿದ್ದರು. ಅಂತಹ ಸರಕಾರವನ್ನು ತೆಗೆಯುವ ತನಕ ಕ್ಷೇತ್ರಕ್ಕೆ ಕಾಲಿಡುವುದಿಲ್ಲಎಂದು ಶಪಥ ಮಾಡಿ, ಬೆಟ್ಟಿಂಗ್ ದಂಧೆಯವರ ಜತೆಗೂಡಿ ಸರಕಾರ ಕೆಡವಿದರು. ಕೋವಿಡ್ ಸಮಯದಲ್ಲಿಅವರ ಸ್ವಾಭಿಮಾನ ಎಲ್ಲಿಗೆ ಹೋಗಿತ್ತು, ಅವರು ಏನೇ ಮಾಡಿದರೂ ಕುಮಾರಸ್ವಾಮಿ ಅವರನ್ನು ಸೋಲಿಸಲು ಸಾಧ್ಯವಿಲ್ಲಎಂದು ಎಂಎಲ್‌ಸಿ ಯೋಗೇಶ್ವರ್ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ
ರಾಜ್ಯದಲ್ಲಿ ನಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ಪಂಚರತ್ನ ಯೋಜನೆಯನ್ನು ಜಾರಿಗೆ ತಂದು ನಾಡಿನ ಎಲ್ಲಾ ಜನರ ಕಲ್ಯಾಣ ಮಾಡಬೇಕು ಎಂದು ನನ್ನ ತಂದೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ನಡೆದಿದ್ದರೂ ಜನರಿಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಹಳೇ ಮೈಸೂರು ಭಾಗದ ಜತೆಗೆ ಉತ್ತರ ಕರ್ನಾಟಕದಲ್ಲೂ ನಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ದೊರೆಯಲಿದೆ. ಮತ್ತೆ ನಾಡಿನಲ್ಲಿ ರೈತರ ಪರವಾದ ಸರಕಾರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಮುಖಂಡರಾದ ಎಂ.ಸಿ. ಕರಿಯಪ್ಪ, ಗೋವಿಂದಹಳ್ಳಿ ನಾಗರಾಜು, ಪ್ರಸನ್ನ ಪಿ ಗೌಡ ಮತ್ತಿತರರು ಉಪಸ್ಥಿತರಿದ್ದರು.