ಕೂಗು ನಿಮ್ಮದು ಧ್ವನಿ ನಮ್ಮದು

ರಷ್ಯಾ ದಾಳಿಗೆ ಅಸುನೀಗಿದ ಕನ್ನಡಿಗ ನವೀನ್ ಮೃತದೇಹ ಪತ್ತೆ

ಕೀವ್: ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಕನ್ನಡಿಗ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ. ನವೀನ್ ಮೃತದೇಹದ ಫೋಟೋವನ್ನು ಅವರ ಸ್ನೇಹಿತರಿಗೆ ಕಳುಹಿಸಲಾಗಿದೆ. ಈ ಫೋಟೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಖಾರ್ಕಿವ್ ನಲ್ಲಿ ನವೀನ್ ಮೃತದೇಹ ಇದ್ದು, ಇವತ್ತು ಭಾರತಕ್ಕೆ ಸಾಗಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಕ್ರೇನ್ ರಾಯಭಾರಿ ಕಚೇರಿ ಮೂಲಕ ನವೀನ್ ಪಾರ್ಥಿವ ಶರೀರ ವಾಪಸ್ ತರಲು ಯತ್ನ ಮಾಡಲಾಗುತ್ತಿದೆ.

ಅಧಿಕಾರಿಗಳ ಹಂತದಲ್ಲಿ ಮಾತುಕತೆ ಈಗಾಗಲೇ ನಡೆದಿದ್ದು, ಖಾರ್ಕಿವ್ ನಿಂದ ಇವತ್ತು ಗಡಿಗೆ ರಸ್ತೆ ಮಾರ್ಗವಾಗಿ ಮೃತ ದೇಹ ಸಾಗಿಸುವ ಸಾಧ್ಯತೆ ಇದೆ.‌ ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ರವಾನಿಸಲು ಚಿಂತನೆ ನಡೆಸಲಾಗಿದ್ದು, ದೆಹಲಿ ಮೂಲಕ ರಾಜ್ಯ ಸರ್ಕಾರಕ್ಕೆ ಒಪ್ಪಿಸಲು ಯೋಜನೆ ರೂಪಿಸಲಾಗಿದೆ. ರಷ್ಯಾ ಉಕ್ರೇನ್ ನಡುವಿನ ಯುದ್ಧದ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ (22) ಬಲಿಯಾಗಿದ್ದಾನೆ.

ಖಾರ್ಕೀವ್‍ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ಸಾವನ್ನಪ್ಪಿದ್ದಾನೆ. ಖಾರ್ಕೀವ್‍ನಲ್ಲಿ ಇಂದು ಮುಂಜಾನೆ ಎಳು ಗಂಟೆಗೆ ಸೂಪರ್ ಮಾರ್ಕೆಟ್‍ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ನವೀನ್ ದುರ್ಮರಣಕ್ಕೀಡಾಗಿದ್ದಾರೆ. ಈ ಕುರಿತು ಖಾರ್ಕೀವ್‍ನಲ್ಲಿರುವ ನವೀನ್ ಸ್ನೇಹಿತ ಶ್ರೀಕಾಂತ್ ಮಾದ್ಯಮದವರ ಜೊತೆಗೆ ಮಾತನಾಡಿ, ಮುಂಜಾನೆ ಎಳು ಮೂವತ್ತಕ್ಕೆ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಿತ್ತು.

ರೈಲಿನ ಮೂಲಕ ಪೋಲೆಂಡ್ ಗಡಿ ತಲುಪಬೇಕಿತ್ತು. ನವೀನ್ ಸೇರಿ ಒಟ್ಟು ಎಂಟು ಜನ ನಮ್ಮ ತಂಡ ರೈಲ್ವೇ ನಿಲ್ದಾಣಕ್ಕೆ ಹೊರಡಬೇಕಿತ್ತು. ಈ ವೇಳೆ ಎಲ್ಲರಿಗೂ ಊಟ ತರಲು ಬಂಕರ್‍ನಿಂದ ನವೀನ್ ಹೊರ ಹೋಗಿದ್ದ. ಸೂಪರ್ ಮಾರ್ಕೆಟ್ ಬಳಿ ತುಂಬಾ ಕ್ಯೂ ಇದೆ. ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ. ಅದೇ ಅವನ ಕೊನೆ ಮಾತಾಗಿತ್ತು. ನಮಗೆಂದು ಊಟ ತರಲು ಹೋದವ ಬರಲೇ ಇಲ್ಲ ಅಂತ ಅವನ ಸ್ನೇಹಿತರು ಭಾವುಕರಾದರು.

error: Content is protected !!