ನವದೆಹಲಿ: ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯನ್ನು ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿದೆ. ಸಮೀಕ್ಷೆಯ ಪಟ್ಟಿಯಲ್ಲಿ ಭಾರತದ ಪ್ರಧಾನ ಮಂತ್ರಿ, ನರೇಂದ್ರ ಮೋದಿ ಅವರು ನಂ.1 ಸ್ಥಾನದಲ್ಲಿದ್ದಾರೆ. ಜಾಗತಿಕ ಪಟ್ಟಿಯಲ್ಲಿ ವಿಶ್ವದ ಹದಿಮೂರು ನಾಯಕರು ಸ್ಥಾನ ಪಡೆದಿದ್ದಾರೆ. ಶೇ.71 ರಷ್ಟು ರೇಟಿಂಗ್ ಪಡೆದಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಶೇ.43 ರಷ್ಟು ರೇಟಿಂಗ್ ಪಡೆದಿದ್ದು, ಆರನೇಯ ಸ್ಥಾನದಲ್ಲಿದ್ದಾರೆ. ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೋ ಕೂಡಾ ಶೇ.43 ರಷ್ಟು ರೇಟಿಂಗ್ ಪಡೆದು ಜೋ ಬೈಡೆನ್ ಅವರಿಗೆ ಸಮಾನಾಂತರ ಸ್ಥಾನದಲ್ಲಿದ್ದಾರೆ. ಇನ್ನೂ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶೇ.41 ರಷ್ಟು ರೇಟಿಂಗ್ ಪಡೆದುಕೊಂಡಿದ್ದಾರೆ.
2021ರಲ್ಲಿಯೂ ಬಿಡುಗಡೆಯಾದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಸ್ಥಾನದಲ್ಲಿದ್ರು.
ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್ಡಮ್ ಹಾಗೂ ಯುನೈಟೆಡ್ ಸ್ಟೇಟ್ಸ್ ನಾಯಕರು ಸ್ಥಾನ ಪಡೆದುಕೊಂಡಿದ್ದಾರೆ. ಸಮೀಕ್ಷೆಯಲ್ಲಿ ನೀಡಲಾದ ರೇಟಿಂಗ್ 2022ರ ಜನವರಿ 13 ರಿಂದ 19 ರವರೆಗೆ ಸಂಗ್ರಹಿಸಲಾದ ಡೇಟಾವನ್ನು ಆಧರಿಸಿದೆ ಎಂದು ಮಾರ್ನಿಂಗ್ ಕನ್ಸಲ್ಟ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಜೊತೆಗೆ 2020ರಲ್ಲಿ ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಶೇ.84 ರಷ್ಟು ರೇಟಿಂಗ್ ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿದ್ರು. 2021ರಲ್ಲಿ ಆ ಪ್ರಮಾಣ ಶೇ.63ಕ್ಕೆ ಇಳಿದಿತ್ತು.