ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಗೆ ಸೆಳೆಯಲು ಈಗಾಗಲೇ ರಾಜ್ಯ ನಾಯಕರು ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿರುವ ಗೆಜ್ಜಲಗೆರೆ ಬಳಿಯಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಅವರು ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಧಾನಿ ಕಾರ್ಯಕ್ರಮದಲ್ಲಿ ಯಾರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ರಮ ಇರುವುದಿಲ್ಲ ಎಂದರು.
ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಮಾತನಾಡಿದ ಜೋಶಿ, ಸೂಕ್ತ ಸಮಯದಲ್ಲಿ ನಿಮಗೆ ಎಲ್ಲಾ ವಿಷಯ ತಿಳಿಸಲಾಗತ್ತದೆ ಎಂದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿದ್ದು, ಆ ಭಾಗದ ಕಾಂಗ್ರೆಸ್, ಜೆಡಿಎಸ್ನ ಕೆಲ ಮುಖಂಡರಿಗೆ ಗಾಳ ಹಾಕುತ್ತಿದೆ. ಈ ಪಟ್ಟಿಯಲ್ಲಿ ಸುಮಲತಾ ಅಂಬರೀಶ್ ಸಹ ಇದ್ದಾರೆ ಎನ್ನಲಾಗಿದೆ. ಇನ್ನು ಸುಮಲತಾ ಅಂಬರೀಶ್ ಅವರು ಬಿಜೆಪಿ ಬಾಗಿಲಲ್ಲಿ ಇದ್ದಾರೆ ಎನ್ನುವುದಕ್ಕೆ ಸ್ವತಃ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸುಳಿವು ಕೊಟ್ಟಿದ್ದರು.