ನವದೆಹಲಿ: ಪ್ರತಿ ವರ್ಷವು ಹುಟ್ಟುಹಬ್ಬಗಳು ಬಂದು ಹೋಗುತ್ತವೆ, ಆದ್ರೆ ನಾನು ಇವುಗಳಿಂದ ದೂರ ಇರಲು ಬಯಸುತ್ತೇನೆ. ನನ್ನ ಇಡೀ ಜೀವನದಲ್ಲಿ ನಿನ್ನೆಯ ದಿವಸ ಮಾತ್ರ ಅತ್ಯಂತ ಭಾವನಾತ್ಮಕವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು. ಇವತ್ತು ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ವ್ಯಾಕ್ಸಿನೇಷನ್ ಫಲಾನುಭವಿಗಳನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರ ಸೇವೆಯನ್ನು ಶ್ಲಾಘಿಸಿದ್ರು.
ಕಳೆದ ಒಂದು ವರ್ಷದಿಂದ ವೈದ್ಯಕೀಯ ಸಿಬ್ಬಂದಿ ವಾರಿಯರ್ಗಳಾಗಿ ಕೋವಿಡ್ ವಿರುದ್ಧ ಹೋರಾಡುತ್ತಿದ್ದೀರಿ. ಜೊತೆಗೆ ನಿಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದೀರಿ. ಈಗ ವ್ಯಾಕ್ಸಿನ್ ಹಂಚಿಕೆಯಲ್ಲೂ ವಿಶ್ವ ದಾಖಲೆ ಮಾಡುವ ಮೂಲಕ ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.
ಲಸಿಕೆ ಪಡೆದ ನಂತರ ಹಲವು ಜನರಿಗೆ ಅಡ್ಡಪರಿಣಾಮ ಕಾಣಿಸಿಕೊಳ್ಳುತ್ತಿತ್ತು. ಆದ್ರೆ ೨.೫ ಕೋಟಿ ಜನರು ಲಸಿಕೆ ಪಡೆದ ನಂತರ ಹಲವು ರಾಜಕೀಯ ಪಕ್ಷಗಳಿಗೆ ಜ್ವರ ಬಂದ ಅನುಭವವಾಗಿದೆ ಎಂದು ಹೆಸರು ಉಲ್ಲೇಖಿಸದೇ ವಿಪಕ್ಷಗಳಿಗೆ ತಿವಿಯುವ ಪ್ರಯತ್ನವನ್ನು ನರೇಂದ್ರ ಮೋದಿ ಮಾಡಿದ್ರು. ನಿನ್ನೆಯ ದಿನ ಇಡೀ ದೇಶವೇ ಕೋವಿನ್ ಡ್ಯಾಶ್ ಬೋರ್ಡ್ ನೋಡಿದೆ. ಪ್ರತಿ ಸೆಕೆಂಡಿಗೆ ೪೩೪ ಜನರು, ಪ್ರತಿ ನಿಮಿಷಕ್ಕೆ ೨೬೦೦೦ ಜನರು, ಪ್ರತಿ ಗಂಟೆಗೆ ೧೫.೬೨ ಲಕ್ಷ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟು ನಿನ್ನೆ ೨,೫೦,೧೦,೩೯೦ ಲಸಿಕೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.