ಕೂಗು ನಿಮ್ಮದು ಧ್ವನಿ ನಮ್ಮದು

ಜ.19ಕ್ಕೆ ಕಲಬುರಗಿ, ಯಾದಗಿರಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ: ಲಂಬಾಣಿ ಧಿರಿಸಲ್ಲಿ 50000 ಮಹಿಳೆಯರು ಸ್ವಾಗತಕ್ಕೆ ಸಜ್ಜು

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಯಾದಗಿರಿ ಜಿಲ್ಲೆ ಸುರಪುರ ಮತಕ್ಷೇತ್ರದ ಕೊಡೇಕಲ್‌ ಗ್ರಾಮದಲ್ಲಿ 4,223 ಕೋಟಿ ರು.ಗಳ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ, ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ವಿತರಣೆಗೆ ನಿಶಾನೆ ತೋರಲಿದ್ದಾರೆ. ಈ ವೇಳೆ, 50 ಸಾವಿರ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಮೋದಿಗೆ ಭವ್ಯ ಸ್ವಾಗತ ನೀಡಲಿದ್ದಾರೆ.

ಗುರುವಾರ ಬೆಳಗ್ಗೆ ದೆಹಲಿಯಿಂದ ಕಲಬುರಗಿಗೆ ಆಗಮಿಸಲಿರುವ ಮೋದಿ, ಕಲಬುರಗಿ ವಿಮಾನ ನಿಲ್ದಾಣದಿಂದ ಕೊಡೇಕಲ್‌ ಬಳಿ ನಿರ್ಮಿಸಲಾದ ವಿಶೇಷ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ, ನಡೆಯುವ ಕಾರ್ಯಕ್ರಮದಲ್ಲಿ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ (ಜಿಪಿಎಸ್‌-ರಿಮೋಟ್‌ ಆಧಾರಿತ ಜಲಾಶಯ ಗೇಟುಗಳ ಚಾಲನೆ) ವ್ಯವಸ್ಥೆ ಉದ್ಘಾಟನೆ, ಜಲಧಾರೆ, ಅಮೃತ್‌ ಎರಡನೇ ಹಂತದ ಅಟಲ್‌ ಮಿಷನ್‌ ಸೇರಿ 4,223 ಕೋಟಿ ರು.ಗಳ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 3 ಲಕ್ಷಕ್ಕೂ ಅಧಿಕ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ಕಾರ್ಯಕ್ರಮಕ್ಕಾಗಿ ವಿಶಾಲ ಪ್ರದೇಶದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ.

ಬಳಿಕ, ಮಧ್ಯಾಹ್ನ 2.10ಕ್ಕೆ ಮಳಖೇಡಕ್ಕೆ ಆಗಮಿಸಲಿದ್ದಾರೆ. ಈ ವೇಳೆ, 50 ಸಾವಿರ ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ನಂತರ ನಡೆಯುವ ಸಮಾರಂಭದಲ್ಲಿ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್‌, ರಾಯಚೂರು ಜಿಲ್ಲೆಗಳ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಏಕಕಾಲದಲ್ಲಿ ಮನೆಗಳ ಹಕ್ಕುಪತ್ರಗಳನ್ನು ವಿತರಣೆಗೆ ಚಾಲನೆ ನೀಡಲಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಕೀಲರು, ವೈದ್ಯರು, ಸಮಾಜ ಸೇವಕರು, ಉದ್ಯಮಿಗಳು ಸೇರಿ ಸಮಾಜದ ವಿವಿಧ ವೃತ್ತಿಗಳಲ್ಲಿರುವ 20 ಸಾವಿರಕ್ಕೂ ಹೆಚ್ಚು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಮಾರಂಭದ ಹಿನ್ನೆಲೆಯಲ್ಲಿ ಮಳಖೇಡ ಸುತ್ತಮುತ್ತಲಿನ ಊರು, ತಾಂಡಾಗಳಲ್ಲಿರುವ ಮನೆಗಳ ಮೇಲೆ ಸುಮಾರು 2.50 ಲಕ್ಷ ಬಿಜೆಪಿ ಧ್ವಜಗಳನ್ನು ಹಾರಿಸಲಾಗುತ್ತಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಕೊಡೇಕಲ್‌ ಹಾಗೂ ಮಳಖೇಡಗಳಲ್ಲಿ 6 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

error: Content is protected !!