ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಶೀಘ್ರದಲೇ ಪುನಾರಚನೆ ಆಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದ ಇಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಯು ಇದೆ. ರಾಜ್ಯಕ್ಕೆ ಯಾವಾಗಲೂ 4 ಸಚಿವ ಸ್ಥಾನಗಳು ಸಿಗುತ್ತಿದ್ದವು. ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿ ಡಿ.ವಿ. ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಶಿ ಮಾತ್ರ ಇದ್ದಾರೆ. ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಸಾವಿನಿಂದ ಒಂದು ಸ್ಥಾನ ಖಾಲಿಯಾಗಿದೆ. ಹೀಗಾಗಿ ರಾಜ್ಯದ ಇಬ್ಬರು ಸಂಸದರಿಗೆ ರಾಜ್ಯ ಖಾತೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಸುರೇಶ್ ಅಂಗಡಿ ಅವರಿಂದ ತೆರವಾದ ಸಚಿವ ಸ್ಥಾನಕ್ಕೆ ಮತ್ತೊಬ್ಬ ಲಿಂಗಾಯತ ಸಂಸದನ ಆಯ್ಕೆ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಸಂಸದರಾದ ಶಿವಕುಮಾರ್ ಉದಾಸಿ ಅಥವಾ ಬಿ.ವೈ. ರಾಘವೇಂದ್ರ ನಡುವೆ ಪೈಪೋಟಿ ಇದೆ. ಒಂದು ವೇಳೆ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುವುದಾದರೆ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಮತ್ತೊಂದು ಸ್ಥಾನಕ್ಕೆ ಎಸ್ಸಿ ಅಥಾವ ಓಬಿಸಿಗೆ ನೀಡುವ ಅಂದಾಜು ಮಾಡಲಾಗಿದೆ. ಎಸ್ಸಿ ಸಮುದಾಯದಲ್ಲಿ ಉಮೇಶ್ ಜಾಧವ್ ಅವರಿಗೆ ಅವಕಾಶ ಸಿಗುವ ಸಂಭವ ಇದೆ. ಓಬಿಸಿ ಕೋಟಾದಲ್ಲಿ ಪಿ.ಸಿ. ಮೋಹನ್ ಹೆಸರು ಚರ್ಚೆ ಆಗುತ್ತಿದೆ,
ಸುದೀರ್ಘವಾಗಿ ಕುಟುಂಬದ ಜೊತೆ ಭವಿಷ್ಯದ ರಾಜಕೀಯ ಆಗುಹೋಗುಗಳ ಬಗ್ಗೆ ಸಿಎಂ ಬಿಎಸ್ವೈ ಮುಕ್ತವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಚರ್ಚೆಯ ಬೆನ್ನಲ್ಲೇ ಬಿ ವೈ ವಿಜಯೇಂದ್ರ ಮೂರು ದಿನಗಳ ಹಿಂದೆ ದೆಹಲಿಗೆ ತೆರಳಿರುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಕೆಲಸದ ಮೇಲೆ ದೆಹಲಿ ಭೇಟಿ ಎನ್ನುತ್ತಿರುವ ವಿಜಯೇಂದ್ರ, ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಅಣ್ಣ ರಾಘವೇಂದ್ರಗೆ ಸಚಿವ ಸ್ಥಾನ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಲು ವಿಜಯೇಂದ್ರ ದೆಹಲಿಗೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಜ್ಯೋತಿರಾಧಿತ್ಯ ಸಿಂಧ್ಯ, ಸರಬಾನಂದ ಸೋನುವಾಲಾ, ಸುಶೀಲ್ ಮೋದಿ ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ.