ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿರುವ ಬಿಜೆಪಿ ಚಿತ್ತ ಇದೀಗ ಕರ್ನಾಟಕದ ರಾಜಕೀಯದತ್ತ ನೆಟ್ಟಿದೆ. ಇದೀಗ ಪ್ರಧಾನಿ ಮೋದಿ ರಾಜ್ಯದ ಭೇಟಿಗೆ ಮುಂದಾಗಿರುವುದು ಭಾರೀ ಕುತೂಹಲ ಮೂಡಿಸಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಿಜೆಪಿಗೆ ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುವ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಚುನಾವಣಾ ತಯಾರಿಗೆ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದರ ಭಾಗವೆಂಬಂತೆ ಇದೀಗ ಮೋದಿ ಮಾರ್ಚ್ ಇಪ್ಪತ್ನಾಲ್ಕರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿಶೇಷವಾಗಿ ನರೇಂದ್ರ ಮೋದಿ ಕಲಬುರಗಿಗೆ ಭೇಟಿ ಕೊಡಲಿದ್ದಾರೆ ಎಂದು ಮಾಹಿತಿ ಹೊರಬಿದ್ದಿದ್ದು, ಕಲಬುರಗಿಗೆ ಯಾಕೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಮೋದಿ ಕೇಂದ್ರದ ಮಹತ್ವದ ಸ್ವಾಮಿತ್ವ ಯೋಜನೆಯ ಪ್ರಾಯೋಗಿಕ ಚಾಲನೆ ನೀಡಲು ಕಲಬುರಗಿಗೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಆದ್ರೆ ಈ ಹಿಂದಿನ ಇತಿಹಾಸವನ್ನು ಗಮನಿಸಿದ್ರೆ, ಈ ಭೇಟಿಯ ಹಿಂದೆ ಭಾರೀ ನಿರೀಕ್ಷೆ ಮತ್ತು ಲೆಕ್ಕಾಚಾರ ಅಡಗಿದೆ. 4 ವರ್ಷಗಳ ಹಿಂದೆ ಕರ್ನಾಟಕದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೂ ಮುನ್ನ ಮೋದಿ ಕಲಬುರಗಿಗೆ ಭೇಟಿ ನೀಡಿದ್ದರು. ಅಲ್ಲದೆ ಚುನಾವಣೆ ಕಹಳೆಯನ್ನು ಕೂಡ ಕಳಬುರಗಿಯಿಂದಲೇ ಮೊಳಗಿಸಿದ್ದರು. ಮೋದಿ 4 ವರ್ಷಗಳ ಹಿಂದೆ ಕಲಬುರಗಿಗೆ ಭೇಟಿ ನೀಡಿ ಆಗಿನ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಚುನಾವಣೆ ಕಹಳೆ ಮೊಳಗಿಸಿದ್ದರು. ಇದೀಗ ಮತ್ತೆ ಮೋದಿ ಚುನಾವಣೆಗೆ ವರ್ಷಗಳು ಬಾಕಿ ಇರುವಂತೆ ಈ ಬಾರಿಯೂ ಕಲಬುರಗಿಯಿಂದಲೇ ಚುನಾವಣಾ ಸಿದ್ಧತೆಯ ಕಹಳೆ ಮೊಳಗಿಸ್ತಾರಾ ಎಂಬ ಕೂತುಹಲ ಕಾಡಲಾರಂಭಿಸಿದೆ.
ಆದ್ರೆ ಇನ್ನೂ ಕೂಡ ಕಲಬುರಗಿ ಭೇಟಿಯ ಬಗ್ಗೆ ಪ್ರಧಾನಿ ಮೋದಿ ಕಚೇರಿಯಿಂದ ದೃಢವಾಗಿಲ್ಲ. ಸಧ್ಯದಲ್ಲೇ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ರು. 2019ರ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಖರ್ಗೆ ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಹೈಕಮಾಂಡ್ ಪಣ ತೊಟ್ಟಿತ್ತು. ಈ ಕಾರಣಕ್ಕೆ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಜಾಧವ್ ಅಂತಿಮವಾಗಿ ಗೆಲುವಿನ ನಗೆ ಬೀರಿದ್ರು.