ಕೂಗು ನಿಮ್ಮದು ಧ್ವನಿ ನಮ್ಮದು

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರಲಿದೆ ಕುತ್ತು; ಪರ್ಯಾಯ ನಾಯಕರ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ಇದೀಗ ಉನ್ನತ ಮಟ್ಟದಲ್ಲಿ ನಾಯಕತ್ವ ಬದಲಾವಣೆಗೆ ಸಿದ್ಧತೆ ನಡೆಸಿದೆ. ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸ್ಥಾನದಿಂದ ತೆಗೆದುಹಾಕಲು ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ಸೋಲಿಗೆ ನಿಖರವಾದ ಕಾರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ಈ ಕ್ರಮ ಕೈಗೊಳ್ಳಬಹುದು ಎಂದು ವರದಿಯಾಗಿದೆ.

ಸೋಲಿನ ಮೌಲ್ಯಮಾಪನ ಮಾಡಲು ಬಿಜೆಪಿಯ ಕೇಂದ್ರ ನಾಯಕತ್ವವು ಕ್ಷೇತ್ರವಾರು ಫಲಿತಾಂಶಗಳ ವರದಿಯನ್ನು ಕೇಳಿದೆ. ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಮುಖ್ಯ ಚುನಾವಣಾ ತಂತ್ರಜ್ಞ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆಗಾಗಿ ಕರ್ನಾಟಕದ ನಾಯಕರನ್ನು ದೆಹಲಿಗೆ ಕರೆಸುವ ಸಾಧ್ಯತೆಯಿದೆ. ಹೀನಾಯ ಸೋಲಿಗೆ ಕಾರಣಗಳನ್ನು ಗುರುತಿಸಲು ಪಕ್ಷದ ಘಟಕದಿಂದ, ಸ್ವತಂತ್ರ ವಿಶ್ಲೇಷಕರಿಂದ ವರದಿಗಳನ್ನು ಕೇಳಲಾಗಿದೆ ಎನ್ನಲಾಗುತ್ತಿದೆ. ಸುಮಾರು ಐದು ಡಜನ್ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮಾಡಿ ಹುರುಪು ಪ್ರದರ್ಶಿಸಿದರೂ ರಾಜ್ಯ ನಾಯಕರು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿಲ್ಲದಿರುವ ಬಗ್ಗೆ ಕೇಂದ್ರ ನಾಯಕತ್ವವು ಅಸಮಾಧಾನಗೊಂಡಿದೆ ಎಂದು ಕರ್ನಾಟಕದ ಮೂಲಗಳು ಹೇಳಿರುವುದಾಗಿ ವರದಿ ಮಾಡಿದೆ.

ಮೋದಿ ಬ್ರ್ಯಾಂಡ್‌ಗೆ ಹಾನಿಯಾಗಿದೆ ಎಂದು ಕೇಂದ್ರ ನಾಯಕರು ಕೋಪಗೊಂಡಿದ್ದಾರೆ ಮತ್ತು ವಿವರಣೆಯನ್ನು ಕೇಳುತ್ತಿದ್ದಾರೆ. ಈ ವರ್ಷದ ಆರಂಭದಿಂದಲೇ ಪಕ್ಷದ ಕ್ಷೀಣಿಸಿದ ವರ್ಚಸ್ಸಿನ ಬಗ್ಗೆ ಸತ್ಯವನ್ನು ಹೇಳುವ ಬದಲು ಸ್ಥಳೀಯ ನಾಯಕತ್ವವು ಪಕ್ಷದ ಭವಿಷ್ಯದ ಬಗ್ಗೆ ಏಕೆ ಸುಳ್ಳು ಚಿತ್ರಣವನ್ನು ನೀಡಿದೆ ಎಂಬುದನ್ನು ತಿಳಿಯಲು ಅವರು ಬಯಸುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

error: Content is protected !!