ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೊಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇಂದು ಮತ್ತೆರೆಡು ದೂರು ದಾಖಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಾಮಾಜಿಕ ಕಾರ್ಯಕರ್ತ ಮಧು ಎನ್ನುವವರು ದೂರು ನೀಡಿದ್ದಾರೆ. ಮತ್ತೊಂದೆಡೆ ಮೈಸೂರಿನಲ್ಲಿ ಮುರುಘಾ ಮಠದ ಅಡುಗೆ ಸಹಾಯಕಿಯೊಬ್ಬರು ತನ್ನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪ ಹೊರಿಸಿ ದೂರು ದಾಖಲಿಸಿದ್ದು, ಪ್ರಕರಣವನ್ನು ಸದ್ಯ ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿದೆ.
ವಸತಿ ಶಾಲೆಯ ಬಾಲಕಿ ಮೇಲೆ ಲೌಂಗಿಕ ದೌರ್ಜನ್ಯ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ದೌರ್ಜನ್ಯ ಅನುಭವಿಸಿರುವ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ದೂರು ಸ್ವೀಕರಿಸಿರುವ ಮಕ್ಕಳ ಕಲ್ಯಾಣ ಸಮಿತಿಯು ಹಿಂಬರಹ ನೀಡಿದ್ದು, ಈಗಾಗಲೇ ವಿದ್ಯಾರ್ಥಿನಿಗೆ ಆಪ್ತ ಸಮಾಲೋಚನೆ ಮಾಡಿದ್ದೇವೆ.
ಮತ್ತೊಂದು ಪ್ರಕರಣ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮೈಸೂರಿನಲ್ಲಿ ದಾಖಲಾಗಿ, ಚಿತ್ರದುರ್ಗಕ್ಕೆ ವರ್ಗಾವಣೆ ಆಗಿರುವ ಮತ್ತೊಂದು ಪ್ರಕರಣವೂ ಮೊದಲ ಪ್ರಕರಣದ ರೀತಿಯಲ್ಲಿಯೇ ಇದೆ ಎಂದು ಒಡನಾಡಿ ಸಂಸ್ಥೆಯ ಸ್ಟಾನ್ಲಿ ಹೇಳಿದ್ದಾರೆ.
ಎರಡೂವರೆ ವರ್ಷಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ನಿನ್ನೆಯಷ್ಟೇ (ಅ 13) ಮಕ್ಕಳು ನಮ್ಮ ಬಳಿಗೆ ಬಂದಿದ್ದರು. ಬಾಲಕಿಯು ಮಠದಲ್ಲಿ ಓದುತ್ತಿದ್ದಳು. ಆಕೆಯ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು. ಮುರುಘಾ ಶ್ರೀಗಳಂಥ ಹಿರಿಯ ಪ್ರಭಾವಿಗಳ ವಿರುದ್ಧ ನಾವು ಹೇಗೆ ಮಾತನಾಡುವುದು ಎಂಬ ಭಾವನೆಯಿಂದ ಮಕ್ಕಳು ಮಾತನಾಡಿರಲಿಲ್ಲ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಮಠದಲ್ಲಿರುವ ಇತರ ಮಕ್ಕಳ ಕೌನ್ಸೆಲಿಂಗ್ ಮಾಡಿದರೆ ಇನ್ನಷ್ಟು ಪ್ರಕರಣಗಳು ಹೊರಬರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಮಠದಲ್ಲಿ ಕೆಲವರವನ್ನು ರಕ್ಷಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ನ್ಯಾಯಾಧೀಶರು ಮಠಕ್ಕೆ ಹೋಗಿ ಮಾತನಾಡಬೇಕು. ಪ್ರಕರಣವನ್ನು ಚಿತ್ರದುರ್ಗ ಠಾಣೆಗೆ ವರ್ಗಾಯಿಸಲಾಗಿದೆ, ಆದರೆ ಮಕ್ಕಳು ಮೈಸೂರಿನಲ್ಲೇ ಇರುತ್ತಾರೆ. ಪೋಷಕರು ಇರುವುದರಿಂದ ಬಾಲ ಮಂದಿರಕ್ಕೆ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಕರಣ ವರ್ಗಾವಣೆ
ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ತಡರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಠದಲ್ಲಿ ಅಡುಗೆ ಸಹಾಯಕಿ ಆಗಿದ್ದ ಮಹಿಳೆ ತನ್ನ ಓರ್ವ ಮಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇನ್ನಿಬ್ಬರು ಬಾಲಕಿಯರು ಸೇರಿದಂತೆ ಒಟ್ಟು ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.