ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಮತ್ತೆ ನೆತ್ತರು ಹರಿದಿದೆ. ನಿನ್ನೆ ಭಾನುವಾರ ರಾತ್ರಿ 11 ಗಂಟೆಯ ಆಸುಪಾಸಿನಲ್ಲಿ ನಗರದ ಶೇಖ್ ಕಾಲೇಜು ಬಳಿ ವೈಯಕ್ತಿಕ ದ್ವೇಷಕ್ಕೆ ಯುವಕರ ಗುಂಪೊಂದು ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ. ಬೆಳಗಾವಿಯ ಆಜಮ್ ನಗರದ ನಿವಾಸಿ ಶಹಬಾಜ್ (24) ಕೊಲೆಯಾಗಿದ್ದು, ಕೊಲೆಗೆ ವೈಯಕ್ತಿಕ ಹಾಗೂ ಹಳೆಯ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಕೊಲೆಯಾದ ಶಹಬಾಜ್, ಕೊಲೆ ಯತ್ನ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ಮೇಲೆ ನಗರದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದ್ದು, ಯಾವ ಕಾರಣಕ್ಕೆ ಶಹಬಾಜ್ ಕೊಲೆ ನಡೆದಿದೆ ಅನ್ನೊದು ಗೊತ್ತಾಗಬೇಕಿದೆ.
ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಗಳು..?
ಯುವಕರ ಗುಂಪೊಂದು ಶೇಖ್ ಕಾಲೇಜು ಬಳಿ ಶಹಬಾಜ್ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಶಹಬಾಜ್ ರಕ್ತದ ಮಡುವಿನಲ್ಲಿ ಬಿದ್ದ ದೃಶ್ಯಗಳು ಸಮಿಪದ ಸಿಸಿಟಿವಿಯಲ್ಲಿ ಸೆರೆಯಾಗಿವೆ ಎನ್ನಲಾಗಿದ್ದು, ಪೊಲೀಸರು ಸಿಸಿಟಿವಿ ಜಾಡು ಹಿಡಿದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ. ಇನ್ನು ಗಂಭಿರವಾಗಿ ಗಾಯಗೊಂಡ ಶಹಜಾಜನನ್ನು ಕೂಡಲೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೂ ಮುನ್ನವೆ ಶಹಬಾಜ್ ಸಾವನಪ್ಪಿದ್ದಾನೆ. ಶಹಬಾಜ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಕೆಲ ಯುವಕರ ಗುಂಪು ಬೆಳಗಾವಿ ಜಿಲ್ಲಾಸ್ಪತ್ರೆಯ ಬಳಿ ಸೇರಿ ಗಲಾಟೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಯಾವುದೇ ಅಹಿತಕರ ಘಟನೆ ನಡೆಯದೇ ಪರಿಸ್ಥಿತಿ ಹತೋಟಿಗೆ ಬಂದಿದೆ. ಹಿರಿಯ ಪೋಲೀಸ್ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯ ಬಳಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಮಾಳಮಾರುತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.