ಕೂಗು ನಿಮ್ಮದು ಧ್ವನಿ ನಮ್ಮದು

ಮುಂಬೈ ಇಂಡಿಯನ್ಸ್ ಬೆವರಿಳಿಸಿದ ಗುಜರಾತ್ ಟೈಟನ್ಸ್: 6 ರನ್ ಗಳ ರೋಚಕ ಗೆಲುವಿನೊಂದಿಗೆ ಶುಭಾರಂಭ

ಅಹ್ಮದಾಬಾದ್‌: ಜಿದ್ದಾಜಿದ್ದಿನ ಪೈಪೋಟಿ ನಡುವೆ ಒತ್ತಡ ನಿಭಾಯಿಸಿದ ಗುಜರಾತ್‌ ಟೈಟನ್ಸ್‌ ತಂಡ ಬಲಾಡ್ಯ ಮುಂಬೈ ಇಂಡಿಯನ್ಸ್‌ ಎದುರು 6 ರನ್‌ಗಳ ರೋಚಕ ಜಯ ದಾಖಲಿಸುವ ಮೂಲಕ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಚದುರಂಗದಾಟದಂತೆ ಸಾಗಿಬಂದಿದ್ದ ಪಂದ್ಯದಲ್ಲಿ ಗೆಲುವು 50-50 ಇತ್ತು. ಆದರೆ, ಕೊನೆಯ ಓವರ್‌ನಲ್ಲಿ ತಾಳ್ಮೆಯ ಆಟ ಪ್ರದರ್ಶಿಸಿದ ಗುಜರಾತ್‌ ಟೈಟನ್ಸ್ ತಂಡ ಗೆಲುವಿನ ನಗೆ ಬೀರಿತು.

ಪಂದ್ಯದಲ್ಲಿ ಟಾಸ್‌ ಗೆದ್ದು ಮುಂಬೈ ಇಂಡಿಯನ್ಸ್‌ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆಯೇ 169 ರನ್‌ಗಳ ಗುರಿ ಬೆನ್ನತ್ತಿ ಕೊನೆಯ ಓವರ್‌ನಲ್ಲಿ ಕೇವಲ 6 ರನ್‌ ಅಂತರದಿಂದ ವೀರೋಚಿತ ಸೋಲನುಭವಿಸಿತು. ಕಡೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿಗೆ 19 ರನ್‌ಗಳ ಅವಶ್ಯಕತೆ ಇದ್ದಾಗ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಎದುರಾಳಿ ತಂಡದ ವೇಗಿ ಉಮೇಶ್ ಯಾದವ್‌ ಎದುರು ಮೊದಲ 2 ಬೌಲ್ ಗಳಲ್ಲಿ ಹತ್ತು ರನ್ ಕಲೆ ಹಾಕಿದರು. ಆದರೆ ನಂತರದ ಎಸೆತದಲ್ಲಿ ಸಿಕ್ಸರ್‌ ಬಾರಿಸಲು ಪ್ರಯತ್ನಿಸಿ ಲಾಂಗ್‌ ಆನ್‌ ನಲ್ಲಿ ಕ್ಯಾಚನ್ನಿತ್ತರು.‌‌ ನಂತರ ಬಂದ ಪಿಯೂಶ್‌ ಚಾವ್ಲಾ ಕೂಡ ಸಿಕ್ಸರ್ ಬಾರಿಸಲು ಮುಂದಾಗಿ ವಿಕೆಟ್‌ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಕೊನೆಗೆ 20 ಓವರ್‌ಗಳ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್‌ ತಂಡ 9 ವಿಕೆಟ್‌ ನಷ್ಟಕ್ಕೆ ಕೇವಲ 162 ರನ್‌ ಮಾತ್ರ ಗಳಿಸಿ ಸೋಲಿಗೆ ತಲೆಬಾಗಿತು.

ಮುಂಬೈ ಇಂಡಿಯನ್ಸ್‌ ತಂಡ ಆರಂಭದಲ್ಲಿ ಇಶಾನ್‌ ಕಿಶನ್‌ (0) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಮಾಜಿ ನಾಯಕ ರೋಹಿತ್‌ ಶರ್ಮಾ 29 ಎಸೆತಗಳಲ್ಲಿ 43 ರನ್‌ ಬಾರಿಸಿ ತಂಡಕ್ಕೆ ಭರವಸೆಯ ಆರಂಭ ಕೊಟ್ಟರು. ನಂತರ ನಮನ್ ಧೀರ್‌ 10 ಎಸೆತಗಳಲ್ಲಿ 20 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ಈ ಮಧ್ಯ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಡೆವಾಲ್ಡ್‌ ಬ್ರೆವಿಸ್‌, ಎದುರಿಸಿದ 38 ಎಸೆತಗಳಲ್ಲಿ 2 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ 48 ರನ್‌ ಕಲೆ ಹಾಕಿದರು. ಆದರೆ ಮೋಹಿತ್ ಶರ್ಮಾ ತೆಗೆದುಕೊಂಡ ಅದ್ಭುತ ಕ್ಯಾಚ್, ಬ್ರೆವಿಸ್‌ ಪೆವಿಲಿಯನತ್ತ ಸಾಗಬೇಕಾಯಿತು. ರೋಹಿತ್‌ ಮತ್ತು ಬ್ರೆವಿಸ್‌ ವಿಕೆಟ್‌ ಪತನ ಮುಂಬೈ ಸೋಲಿಗೆ ಪ್ರಮುಖ ಕಾರಣವಾಯಿತು. ಕೊನೆಯಲ್ಲಿ ತಿಲಕ್ ವರ್ಮಾ (25) ಹೋರಾಟ ನಡೆಸಿದರೂ ತಂಡವನ್ನು ಜಯದ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಇನ್ನು ಉತ್ತಮ ರನ್ ಕಲೆಹಾಕಿದ ಗುಜರಾತ್‌ ಟೈಟನ್ಸ್‌ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿತ್ತು. ಇನಿಂಗ್ಸ್‌ ಆರಂಭಿಸಿದ ನಾಯಕ ಶುಭಮನ್ ಗಿಲ್‌ 31 ರನ್‌ ಕೊಡುಗೆ ನೀಡಿದರು. ಸಾಯ್ ಸುದರ್ಶನ್‌ 45 ರನ್‌ ಬಾರಿಸಿದರೆ, ರಾಹುಲ್‌ ತೆವಾಟಿಯಾ 22 ರನ್‌ ಸಿಡಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಮುಂಬೈ ಇಂಡಿಯನ್ಸ್‌ ಬೌಲರ್ ಜಸ್‌ಪ್ರೀತ್ ಬುಮ್ರಾ 14 ರನ್ ನೀಡಿ 3 ವಿಕೆಟ್‌ ಪಡೆದು ಟೈಟನ್ಸ್‌ ಬ್ಯಾಟ್ಸ್ ಮನ್ ಗಳಿಗೆ ಬ್ರೇಕ್‌ ಹಾಕಿದರು. ಹೀಗಾಗಿ ಹೆಚ್ಚು ರನ್ ಗಳ ಎದುರು ನೋಡುತ್ತಿದ್ದ ಗುಜರಾತ ಟೈಟನ್ಸ್‌ ಸವಾಲಿನ ಸ್ಕೋರ್‌ಗೆ ಹೆಣಗಾಡಬೇಕಾಯಿತು.

error: Content is protected !!