ಕೂಗು ನಿಮ್ಮದು ಧ್ವನಿ ನಮ್ಮದು

ಆತ ಸೋತ, ನಮ್ಮನ್ನೂ ಸೋಲಿಸಿದ: ಸುಧಾಕರ್ ವಿರುದ್ಧ ನೇರ ಆರೋಪ ಮಾಡಿದ ಎಂಟಿಬಿ ನಾಗರಾಜ್

ಬೆಂಗಳೂರು: ಡಾ.ಕೆ.ಸುಧಾಕರ್ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಆತನೂ ಸೋತ, ನಮ್ಮನ್ನೂ ಸೋಲಿಸಿದ ಎಂದು ಎಂಟಿಬಿ ನಾಗರಾಜ್ ಅವರು ಆತ್ಮಾವಲೋಕನ ಸಭೆಯಲ್ಲಿ ನೇರವಾಗಿ ಆರೋಪಿಸಿದ್ದಾರೆ. ಉಸ್ತುವಾರಿ ಸ್ಥಾನವನ್ನು ಡಾ.ಕೆ.ಸುಧಾಕರ್ ಸಮರ್ಥವಾಗಿ ನಿಭಾಯಿಸಲಿಲ್ಲ. ನನ್ನ, ಚಿಂತಾಮಣಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಡಾ.ಕೆ.ಸುಧಾಕರ್ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಪರಾಜಿತ ಅಭ್ಯರ್ಥಿಗಳ ಆತ್ಮಾವಲೋಕನ ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಎಂಟಿಬಿ, ಬಿ.ಎಸ್.ಯಡಿಯೂರಪ್ಪ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಆದರೆ ಕಾಂಗ್ರೆಸ್ನಲ್ಲಿರುವಾಗ 3 ಬಾರಿ ಗೆದ್ದಿದ್ದ ನಾನು ಬಿಜೆಪಿ ಸೇರಿದ ನಂತರ ಎರಡು ಬಾರಿಯೂ ಸೋಲು ಅನುಭವಿಸಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಕಾಂಗ್ರೆಸ್ನ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಲಿಲ್ಲ. ನಾವು ಕೇವಲ ಸಿದ್ದರಾಮಯ್ಯಗೆ ಮಾತ್ರ ಬೈದೆವು. ಚುನಾವಣೆ ವೇಳೆ ಅಕ್ಕಿ ವಿತರಣೆ ಕಡಿಮೆ ಮಾಡಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್ನ 10 ಕೆಜಿ ಅಕ್ಕಿ ಗ್ಯಾರಂಟಿಯೂ ನಮ್ಮ ಸೋಲಿಗೆ ಕಾರಣವಾಯಿತು ಎಂದರು.

ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಳ್ಳಲಿಲ್ಲ, ಕಾರ್ಯಕರ್ತರ ಆಗುಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲೇ ಇಲ್ಲ. ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು. ಡಾ.ಸುಧಾಕರ್ನಿಂದಾಗಿಯೇ ನಾನು ಸೋತಿದ್ದು ಎಂದು ಆಕ್ರೋಶ ಹೊರಹಾಕಿದ್ದಾರೆ. ನಾನು ಹಣ, ಅಧಿಕಾರದ ಆಸೆಗಾಗಿ ಭಾರತೀಯ ಜನತಾ ಪಕ್ಷಕ್ಕೆ ಬಂದವನಲ್ಲ ಅಂತ ಹೇಳಿದ್ದಾರೆ.

ಸಭೆಯಲ್ಲಿ ಕೆಲವು ನಾಯಕರು ತಮ್ಮ ಸೋಲಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ನಮ್ಮ ಸರ್ಕಾರ, ಸಚಿವರು ಇದ್ದಾಗ ಜನರಿಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿ ಮುಖಂಡರು ಅಭ್ಯರ್ಥಿಗಳ ಮಾತಿಗೆ ಯಾವುದೇ ಬೆಲೆ ಕೊಡಲಿಲ್ಲ. ಸವದಿ ಬಿಜೆಪಿ ತೊರೆದಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೆಟ್ಟು ಬಿತ್ತು. ಬಿಜೆಪಿ ನಾಯಕರು ಮಾಡಿದ ತಪ್ಪಿನಿಂದ ನಾವು ಬಲಿಯಾದೆವು ಎಂದು ಹೇಳಿಕೊಂಡಿದ್ದಾರೆ.

ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳು, ಒಳ ಮೀಸಲಾತಿ ಹಂಚಿಕೆಯ ಒಳ ಏಟು, 40% ಕಮೀಷನ್ ಆರೋಪ ಸೇರಿ ಕೆಲವು ಭ್ರಷ್ಟಾಚಾರ ಆರೋಪ ಪ್ರಕರಣಗಳು, ಅಲ್ಲಲ್ಲಿ ಬೀಸಿದ ವಿರೋಧಿ ಅಲೆ, ಟಿಕೆಟ್ ಹಂಚಿಕೆಯಲ್ಲಿನ ವಿಳಂಬ, ಹೈಕಮಾಂಡ್ ಮೇಲಿನ ಹೆಚ್ಚಿನ ಅವಲಂಬನೆ ಸೋಲಿಗೆ ಕಾರಣ ಅಂತಾನೂ ಪರಾಜಿತ ಅಭ್ಯರ್ಥಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.

error: Content is protected !!