ಕೂಗು ನಿಮ್ಮದು ಧ್ವನಿ ನಮ್ಮದು

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಚಿಂತನೆ: ಸಚಿವ ಎಂಟಿಬಿ ನಾಗರಾಜ್‌

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಈ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿಯು ಚರ್ಚೆ ನಡೆದಿದೆಯೆಂದು ರಾಜ್ಯ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೆಂಕರೆ ಗ್ರಾಮದಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಚುಂಚಶ್ರೀಗಳು ಒಕ್ಕಲಿಗರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಹೇಳಿಕೆ ಕುರಿತು ಸಚಿವ ಎಂಟಿಬಿ ಪ್ರತಿಕ್ರಿಯಿಸಿದರು.

ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಕುರಿತು ಚಿಂತನೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವಯಾವ ರೀತಿ ಯಾವ ಸಮುದಾಯಗಳಿಗೆ ವಿಶೇಷವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಮೀಸಲಾತಿ ಕಲ್ಪಿಸಲು ಬದ್ದವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆಯೆಂದರು.

ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಕ್ಷೇತ್ರದಲ್ಲಿ ನನಗೆ ರಾಜಕೀಯ ಸ್ಥಾನಮಾನ ಕೊಟ್ಟು ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಕ್ಷೇತ್ರದ ಜನರ ಋುಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕಟಾಪುರದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, 2004ರಲ್ಲಿ ನಾನು ಹೊಸಕೋಟೆಗೆ ಬಂದಾಗ ಸಾಕಷ್ಟುಗ್ರಾಮಗಳಲ್ಲಿ ಮತ ಕೇಳಲು ಬಿಡದೆ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದರು.

ಅಂತಹ ಸಂದರ್ಭದಲ್ಲೂ ಕೇವಲ 800 ಮತಗಳ ಅಂತರದಲ್ಲಿ ಗೆಲುವು ಸಾಧಿಸುವಂತೆ ಮಾಡಿ ರಾಜಕೀಯ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದೇರಿ. ಬಳಿಕ ಮೂರು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾನು ಪಕ್ಷ ಬದಲಾವಣೆ ಮಾಡಿದ ಪರಿಣಾಮ ಉಪ ಚುನಾವಣೆಯಲ್ಲಿ ಸೋತು ಹೋದೆ. ಆದರೂ ಬಿಜೆಪಿ ಸರ್ಕಾರದಲ್ಲಿ ಎಂಎಲ್ಸಿಯಾಗಿ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಉಪಚುನವಣೆಯಲ್ಲಿ ನನ್ನ ಸೋಲಿನಿಂದ ಕ್ಷೇತ್ರದ ಮತದಾರರಿಗೆ ಅವರ ತಪ್ಪಿನ ಅರಿವಾಗಿದೆ. ಕ್ಷೇತ್ರದಲ್ಲಿ ಗೆದ್ದಿರುವವರು ಏನು ಕೆಲಸ ಮಾಡುತ್ತಿದ್ದಾರೆ. ಸೋತಿರುವ ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂಬ ಅರಿವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಅಭಿವೃದ್ಧಿಪರ ಕೆಲಸ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ನನ್ನ ಅಭಿವೃದಿಗಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. ಕ್ಷೇತ್ರದ ಜನರಿಗೆ ಒಳಿತು ಮಾಡಲು ಬಂದವನು. ಆದ್ದರಿಂದ ನಾನು ನಮ್ಮ ಕುಟುಂಬ ಜೀವ ಇರುವವರೆಗೆ ಕ್ಷೇತ್ರದ ಜನ ಸೇವೆ ಮಾಡುತ್ತೇವೆಂದರು.

ಇದೇ ಸಂದರ್ಭದಲ್ಲಿ ಸಚಿವ ಎಂಟಿಬಿ ನಾಗರಾಜ್‌ ಅವರು ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಮಹಿಳೆಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸೀರೆ ವಿತರಿಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌, ಟೌನ್‌ ಅಧ್ಯಕ್ಷ ಡಾ.ಸಿ.ಜಯರಾಜ್‌, ಮುಖಂಡರಾದ ವಾಟರ್‌ ಮ್ಯಾನ್‌ ಮುನಿರಾಜು, ಲಕ್ಕೊಂಡಹಳ್ಳಿ ಬಸವರಾಜ್‌ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

error: Content is protected !!