ಬೆಳಗಾವಿ: ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಹೋದಲ್ಲೆಲ್ಲ ಜನರು ತೋರಿಸುತ್ತಿರುವ ಪ್ರೀತಿ, ವಿಶ್ವಾಸ ನೋಡಿದರೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ 2 ಲಕ್ಷ ಮತಗಳಿಗೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿವುದು ನಿಶ್ಚಿತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜಗರಣಿ, ಕವಳೆವಾಡಿ, ರಾಕಸಕೊಪ್ಪ, ಬೆಳವಟ್ಟಿ, ಬಡಸ್, ಬಾಕನೂರು, ಎಳೆಬೈಲ್ ಮೊದಲಾದ ಪ್ರದೇಶಗಳಲ್ಲಿ ಬುಧವಾರ ಸಚಿವರು ಪ್ರಚಾರ ನಡೆಸಿದರು. 2013 ರಿಂದ ನನಗೂ ಕ್ಷೇತ್ರದ ಜನರಿಗೂ ನಿರಂತರ ಸಂಬಂಧವಿದೆ. ನಾನು ಇದೇ ಊರಿನಲ್ಲಿ ಹುಟ್ಟಿ, ಬೆಳೆದವಳು. ಲೋಕಸಭಾ ಅಭ್ಯರ್ಥಿಯಾಗಿರುವ ಮೃಣಾಲ ಹೆಬ್ಬಾಳಕರ್ ಕೂಡ ಇಲ್ಲೇ ಹುಟ್ಟಿ ಬೆಳೆದವನು. ಹಾಗಾಗಿ ಈ ಚುನಾವಣೆ ಸ್ಥಳೀಯರು ಮತ್ತು ಹೊರಗಿನವರ ನಡುವಿನ ಸ್ವಾಭಿಮಾನದ ಚುನಾವಣೆ. ಸ್ಥಳೀಯ ಅಭ್ಯರ್ಥಿಯಾಗಿರುವ, ಕ್ಷೇತ್ರದ ಅಭಿವೃದ್ಧಿಗೆ ಹಲವು ಕನಸುಗಳನ್ನು ಕಟ್ಟಿಕೊಂಡಿರುವ ಮೃಣಾಲ ಹೆಬ್ಬಾಳಕರ್ ಅವರನ್ನು ಅಧಿಕ ಬಹುಮತದಿಂದ ಆಯ್ಕೆ ಮಾಡಿ ಎಂದು ಹೆಬ್ಬಾಳಕರ್ ವಿನಂತಿಸಿದರು.
ಹೊರಗಿನಿಂದ ಚುನಾವಣೆಗೋಸ್ಕರ ಬಂದಿರುವ ಬಿಜೆಪಿ ಅಭ್ಯರ್ಥಿ ಚುನಾವಣೆ ಬಳಿಕ ಇಲ್ಲಿಂದ ಹೊರಟುಹೊಗುತ್ತಾರೆ. ಅವರಿಗೆ ಬೇಕಿರುವುದು ನಿಮ್ಮ ಮತ ಮಾತ್ರ, ಬೆಳಗಾವಿಯ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ. ಬೆಳಗಾವಿ ಬೆಳೆಯುವುದನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದವರು ಅವರು. ಹಾಗಾಗಿಯೇ ಹುಬ್ಬಳ್ಳಿ – ಧಾರವಾಡಕ್ಕೆ ಹೋಲಿಸಿದರೆ ಬೆಳಗಾವಿ ಅಭಿವೃದ್ಧಿ ಕಂಡಿಲ್ಲ. ಬೆಳಗಾವಿಯ ಜನರು ಈ ಅಸಮಾನತೆಗಾಗಿ ನಿರಂತರ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಇಲ್ಲಿಯ ಜನರಿಗೆ ಗಟ್ಟಿ ಧ್ವನಿ ಸಿಕ್ಕಿರಲಿಲ್ಲ. ಈ ಬಾರಿ ಮೃಣಾಲ ಹೆಬ್ಬಾಳಕರ್ ಸಂಸದನಾಗಿ ಬೆಳಗಾವಿಯ ಧ್ವನಿಯನ್ನು ಲೋಕಸಭೆಯಲ್ಲಿ ಮೊಳಗಿಸಲಿದ್ದಾನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮಾತನಾಡಿ, ನಾನು ಇಲ್ಲಿಯ ಜನರಿಗಾಗಿ, ಬೆಳಗಾವಿ ಜಿಲ್ಲೆಗಾಗಿ ಖಂಡಿತವಾಗಿಯೂ ಕೆಲಸ ಮಾಡಲಿದ್ದೇನೆ. ಬೆಳಗಾವಿಯ ವಿವಿದ ಕ್ಷೇತ್ರಗಳ ತಜ್ಞರ ಸಲಹೆ ಪಡೆದು ಸಮಗ್ರ ಅಭಿವೃದ್ಧಿಯ ಯೋಜನೆ ತಯಾರಿಸಲಿದ್ದೇನೆ. ಸುವ್ಯವಸ್ಥಿತ, ಸುಂದರ, ನೆಮ್ಮದಿಯ ನಗರವಾಗಿ ಬೆಳಗಾವಿ ಬೆಳೆಯಬೇಕೆನ್ನುವುದು ನನ್ನ ಕನಸು ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜಗರಣಿ, ಕವಳೆವಾಡಿ ಹಾಗೂ ರಾಕಸಕೊಪ್ಪ ಗ್ರಾಮಸ್ಥರು ಒಗ್ಗಟ್ಟಾಗಿ 19 ವರ್ಷಗಳ ಬಳಿಕ ಆಯೋಜಿಸಿರುವ ಶ್ರೀ ಲಕ್ಷ್ಮೀ ಮಾತಾ ಜಾತ್ರಾ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮೃಣಾಲ ಹೆಬ್ಬಾಳಕರ್ ಭಾಗವಹಿಸಿ, ಆಶೀರ್ವಾದ ಪಡೆದು ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಬಿಜಗರಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ್ ಬೆಳಗಾಂವ್ಕರ್, ವಸಂತ್ ಅಷ್ಟೆಕರ್, ನಾಮದೇವ್ ಮೋರೆ, ಸಂದೀಪ್ ಅಷ್ಟೆಕರ್, ಮಾರುತಿ ಜಾಧವ್, ಶ್ರೀರಂಗ ಭಾಸ್ಕರ್, ರವಿ ಜಾಧವ್, ಡಾಕಳು ಪಾಟೀಲ ಸೇರಿದಂತೆ ದೇವಸ್ಥಾನ ಕಮೀಟಿಯ ಸದಸ್ಯರು ಉಪಸ್ಥಿತರಿದ್ದರು.