ಬೆಳಗಾವಿ: ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗನನ್ನು ಬದುಕಿಸಿಕೊಡುವಂತೆ ಪ್ರಾರ್ಥಿಸಿ ನೊಂದ ತಾಯಿಯೊಬ್ಬರು ಜೀಸಸ್ ಮೊರೆ ಹೋಗಿದ್ದಾರೆ. ಜಿಸಸ್ ಶಿಲುಬೆಯ ಮುಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗನನ್ನು ಮಲಗಿಸಿರುವ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದ್ದು, ತನ್ನ ಮಗನನ್ನು ಬದುಕಿಸಿಕೊಡುವಂತೆ ದೇವರಲ್ಲಿ ಅಂಗಲಾಚುವ ದೃಶ್ಯ ಎಲ್ಲರ ಕರುಳು ಚುರುಕ್ ಎನ್ನುವಂತಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಹೊರ ವಲಯದಲ್ಲಿರುವ ಜಿಸಸ್ ದೇಗುಲದಲ್ಲಿ, ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲೂಕಿನ, ಅಂಬರಡಾ ಗ್ರಾಮದ ಎಂಟು ವರ್ಷದ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಶೈಲೆಶ್ ನನ್ನ ಶಿಲುಬೆಯ ಮುಂದೆ ಮಲಗಿಸಿರುವ ಆ ಹೆತ್ತ ಕರುಳಿನ ಕಣ್ಣಿರು, ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ.
ಇನ್ನು ಬಾಲಕ ಶೈಲೇಶ್ ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಚಿಕಿತ್ಸೆ ಫಲಿಸದೇ, ಮೆದುಳು ಜ್ವರದಿಂದ ಬಾಲಕ ಶೈಲೇಶ್ ಗೆ ಪ್ಯಾರಾಲೈಸಿಸ್ ಅಟ್ಯಾಕ್ ಆಗಿದ್ದು, ಕೋಮಾಗೆ ಜಾರಿದ್ದಾನೆ. ಕೊನೆಗೆ ವೈದ್ಯರು ಮಗು ಬದುಕುಳಿಯುವುದಿಲ್ಲ ಹೆಚ್ಚು ಅಂದ್ರೆ ಅರ್ಧ ಗಂಟೆ ಅಷ್ಟೇ ಎಂದ ಮೇಲೆ ಮಗನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡ ತಾಯಿ, ಅಲ್ಲಿಂದ ನೇರವಾಗಿ ನಂದಗಡಗೆ ಕರೆ ತಂದು ಜಿಸಸ್ ಶಿಲುಬೆಯ ಮುಂದೆ ಕೋಮಾ ಸ್ಥಿತಿಯಲ್ಲಿಯೇ ಇರುವ ಮಗು ಶೈಲೆಶ್ ನನ್ನ ಮಲಗಿಸಿ, ದೇವರ ಮುಂದೆ ಪರಿಪರಿಯಾಗಿ ಅಂಗಲಾಚಿದ್ದಾಳೆ.
ಜೀಸಸ್ ನನ್ನ ಮಗುವನ್ನು ಬದುಕಿಸು ಎಂದು ಕಣ್ಣೀರಿಡುತ್ತಿರುವ ಆ ತಾಯಿಯ ಸಂಕಟ, ರೋಧನೆ ಮಾತ್ರ ಕರುಳು ಹಿಂಡುವಂತಿದೆ. ನಂದಗಡ ಗ್ರಾಮದ ಹೊರವಲಯದಲ್ಲಿರುವ ಲಾರ್ಡ್ ಜಿಸಸ್ ಪುಣ್ಯಕ್ಷೇತ್ರದ ಬಗ್ಗೆ ಹಲವರಿಗೆ ನಂಬಿಕೆಯಿದ್ದು, ಆ ಜೀಸಸ್, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಬಾಲಕ ಶೈಲೇಶ್ ನನ್ನ ಬದುಕಿಸಿ, ಆ ಕಣ್ಣಿರಿಡುತ್ತಿರುವ ತಾಯಿಯ ಮಡಿಲು ತುಂಬಲಿ, ಆ ಹೆತ್ತ ಕರುಳಿನ ಕೂಗು, ಆ ಜೀಸಸ್ ಗೆ ಕೇಳಿಲಿ ಅನ್ನೊದು ನಮ್ಮ ಹಾರೈಕೆ ಕೂಡ.
ಬೆಳಗಾವಿ ಹಾಗೂ ಕಾರವಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಮಗುವಿನ ಹೆಚ್ಚಿನ ಚಿಕಿತ್ಸೆಗೆ ನೆರವಾಗಲಿ ಅನ್ನೊದು ನಮ್ಮ ಆಗ್ರಹ.
ಮಗುವಿನ ಮನೆಯವರ ಮೊಬೈಲ್: 9449075352