ಬೆಳಗಾವಿ: ಈ ಬಾರಿಯ ವಿಧಾನಸಭೆ ಚುನಾವಣೆಗೆ ಕ್ಷೇತ್ರಾದ್ಯಂತ ಪ್ರಚಾರದ ವೇಳೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಲೀಡ್ ಸಿಗುವ ವಿಶ್ವಾಸವಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹಿರಂಗ ಪ್ರಚಾರ ಅಂತ್ಯವಾಗುವ ವೇಳೆ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಾನು ಕ್ಷೇತ್ರಕ್ಕೆ ಹೊಸಬಳಾಗಿದ್ದೆ. ಹೇಳಿಕೊಳ್ಳಲು ಅಭಿವೃದ್ಧಿ ಕೆಲಸಗಳನ್ನೂ ಮಾಡಿರಲಿಲ್ಲ. ಆದರೂ 51 ಸಾವಿರ ಮತಗಳ ಲೀಡ್ ಕೊಟ್ಟಿದ್ದರು. ಆದರೆ ಈ ಬಾರಿ ಇಡೀ ಕ್ಷೇತ್ರದ ಜನರೊಂದಿಗೆ ಸೌಹಾರ್ದಯುತ ಸಂಬಂಧವಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನೂ ಮಾಡಿಸಿದ್ದೇನೆ. ಹಾಗಾಗಿ ಹಿಂದಿನ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳೆಯರಂತೂ ಎಲ್ಲಿ ಹೋದರೂ ಕೈ ಹಿಡಿದು ಮಾತನಾಡಿಸುತ್ತಿದ್ದರು, ಅಷ್ಟೊಂದು ಪ್ರೀತಿ ತೋರಿಸುತ್ತಿದ್ದರು. ವೃದ್ದರು ತಲೆಯ ಮೇಲೆ ಕೈ ಇಟ್ಟು ಆಶಿರ್ವಾದ ಮಾಡುತ್ತಿದ್ದರು. ಮಗಳೇ ಬಂದಳು ಎನ್ನುವ ರೀತಿಯಲ್ಲಿ ಸಂಭ್ರಮಿಸುತ್ತಿದ್ದರು ಎಂದು ಹೆಬ್ಬಾಳಕರ್ ಪ್ರಚಾರದ ವೇಳೆಗಿನ ಅನುಭವಗಳನ್ನು ಹಂಚಿಕೊಂಡರು.
ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ನಾನು ಕೇವಲ ಇದೊಂದು ಚುನಾವಣೆಗೆ ಸೀಮಿತವಾದ ಕ್ಷೇತ್ರ ಎಂದು ಪರಿಗಣಿಸುವುದಿಲ್ಲ. ಇಡೀ ಕ್ಷೇತ್ರ ನನ್ನ ಮನೆ, ಕ್ಷೇತ್ರದ ಜನರೆಲ್ಲ ನನ್ನ ಕುಟುಂಬದ ಸದಸ್ಯರು ಎಂದೇ ಪರಿಗಣಿಸುತ್ತೇನೆ. ಕಳೆದ 5 ವರ್ಷದಲ್ಲಿ ಜನರ ಕಷ್ಟ ಸುಖದಲ್ಲಿ ಜೊತೆಗಿದ್ದಿದ್ದರಿಂದ ಅಂತಹ ಅಟ್ಯಾಚ್ ಮೆಂಟ್ ಬಂದಿದೆ. ಜನರಿಗೂ, ನನ್ನ ಕುಟುಂಬಕ್ಕೂ ಅವಿನಾಭಾವ ಸಂಬಂಧ ಬೆಳೆದಿದೆ. ನಾವೂ ಅವರನ್ನು ಹೊರಗಿನವರು ಎಂದು ಪರಿಗಣಿಸುವುದಿಲ್ಲ, ಅವರೂ ನಮ್ಮನ್ನು ಬೇರೆಯವರು ಎಂದು ತಿಳಿಯುವುದಿಲ್ಲ. ನಾವೆಲ್ಲ ಒಂದೇ ಕುಟುಂಬದ ಸದಸ್ಯರಾಗಿದ್ದೇವೆ ಎಂದು ಅವರು ಕ್ಷೇತ್ರದೊಂದಿಗಿನ ಸಂಬಂಧವನ್ನು ವಿವರಿಸಿದರು.
ಈ ಬಾರಿಯ ವಿಶೇಷವೆಂದರೆ ನಾನು ಅಧಿಕೃತವಾಗಿ ಪ್ರಚಾರ ಆರಂಭಿಸುವ ಮೊದಲೇ ಕ್ಷೇತ್ರದ ಜನರೇ ಸ್ವಯಂ ಪ್ರೇರಣೆಯಿಂದ ಪ್ರಚಾರ ಆರಂಭಿಸಿಬಿಟ್ಟಿದ್ದರು. ಎಲ್ಲೇ ನಾಲ್ಕು ಜನ ಸೇರಿದರೆ ಅಲ್ಲಿ, ಈ ಬಾರಿ ಅಕ್ಕನನ್ನು ಗೆಲ್ಲಿಸಲೇಬೇಕೆಂದು ಮಾತನಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸ್ವಯಂ ಪ್ರೇರಣೆಯಿಂದ ನನ್ನ ಪರವಾದ ಸಂದೇಶ ಕಳಿಸುತ್ತಿದ್ದರು. ಹಾಗಾಗಿ ಅರ್ಧ ಕೆಲಸವನ್ನು ನನಗೆ ಕಡಿಮೆ ಮಾಡಿದ್ದಾರೆ. ಅದರಿಂದಾಗಿಯೇ ನನಗೆ ಕಳೆದ ಬಾರಿಯಷ್ಟು ಟೆನ್ಶನ್ ಆಗಲೇ ಇಲ್ಲ. ಬಹಳ ಖುಷಿ ಖುಷಿಯಿಂದ ಈ ಬಾರಿ ಪ್ರಚಾರ ಮುಗಿಸಿದ್ದೇನೆ. ಕ್ಷೇತ್ರದ ಎಲ್ಲ ಜನರಿಗೂ ನಾನು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮೇ 10ರಂದು ತಪ್ಪದೇ ಮತ ಚಲಾಯಿಸಿ, ಬ್ಯಾಲೆಟ್ ಯುನಿಟ್ ನಲ್ಲಿ 4ನೇ ನಂಬರ್ ನಲ್ಲಿರುವ ಹಸ್ತದ ಗುರುತಿಗೆ ಮತ ಚಲಾಯಿಸಿ ನನ್ನನ್ನು ಆಶಿರ್ವದಿಸಿ ಎಂದು ಮತದಾರರಲ್ಲಿ ವಿನಂತಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.