ಕೂಗು ನಿಮ್ಮದು ಧ್ವನಿ ನಮ್ಮದು

ಪ್ರಾಣಿಗಳಿಗೂ ಹರಡುತ್ತಾ ಮಂಕಿಪಾಕ್ಸ್?, ಮೊದಲ ಬಾರಿ ನಾಯಿಯಲ್ಲಿ ಸೋಂಕು ಪತ್ತೆ

ಪ್ಯಾರಿಸ್: ಕೋವಿಡ್ ನಂತರ ಇದೀಗ ಮಂಕಿಪಾಕ್ಸ್ ಸೋಂಕಿನ ಬಗ್ಗೆ ಜಾಗತಿಕವಾಗಿ ಭೀತಿ ಹೆಚ್ಚಿರುವ ಬೆನ್ನಲ್ಲೇ ನಾಯಿಯೊಂದರಲ್ಲೂ ಸೋಂಕು ದೃಢಪಟ್ಟಿರುವ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಇದೇ ಮೊದಲ ಬಾರಿಗೆ ನಾಯಿಗೂ ಮಂಕಿಪಾಕ್ಸ್ ಸೋಂಕು ತಗುಲಿರುವುದನ್ನು ಫ್ರೆಂಚ್ ಸಂಶೋಧಕರು ದೃಢಪಡಿಸಿದ್ದಾರೆ. ಮಾನವರಿಂದಲೇ ನಾಯಿಗೂ ಸೋಂಕು ಹರಡಿರುವುದಾಗಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ವರದಿಗಳ ಪ್ರಕಾರ, ಸೋಂಕಿತ ನಾಯಿಯ ಮಾಲೀಕ ಸಲಿಂಗಕಾಮಿಯಾಗಿದ್ದು, ಅವರಲ್ಲಿ 12 ದಿನಗಳ ಹಿಂದೆ ಮಂಕಿಪಾಕ್ಸ್ ಲಕ್ಷಣ ಕಂಡುಬಂದಿತ್ತು. ಮಾಲೀಕರೊಂದಿಗೇ ಯಾವಾಗಲೂ ಇರುತ್ತಿದ್ದ ನಾಯಿಯಲ್ಲೂ ಬಳಿಕ ರೋಗದ ಲಕ್ಷಣಗಳು ಕಂಡುಬಂದಿದೆ. ನಾಯಿಯ ಮೈಯಲ್ಲೂ ಕೀವು ಇರುವ ಗುಳ್ಳೆಗಳು ಕಂಡುಬಂದಿದ್ದು, ಹೀಗಾಗಿ ನಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಕಿಪಾಕ್ಸ್ ಸೋಂಕು ಅದಕ್ಕೂ ತಗುಲಿರುವುದು ತಿಳಿದುಬಂದಿದೆ.

ಈ ಮೂಲಕ ಮಾನವರಿಂದ ನಾಯಿಗೂ ಮಂಕಿಪಾಕ್ಸ್ ಹರಡುತ್ತದೆ ಎಂಬುದು ದೃಢವಾಗಿದೆ. ವಿಶ್ವದಾದ್ಯಂತ ಮಂಕಿಪಾಕ್ಸ್ ಭೀತಿಯನ್ನು ಉಂಟುಮಾಡುತ್ತಿದ್ದರೂ ಇಲ್ಲಿಯವರೆಗೆ ನಾಯಿ, ಬೆಕ್ಕುಗಳಂತಹ ಸಾಕು ಪ್ರಾಣಿಗಳಲ್ಲಿ ಎಂದಿಗೂ ರೋಗ ಪತ್ತೆಯಾಗಿರಲಿಲ್ಲ. ಆದರೆ ಇದೀಗ ನಾಯಿಯಲ್ಲಿ ಸೋಂಕು ದೃಢವಾಗಿರುವುದರಿಂದ ಇನ್ನು ಮುಂದೆ ಸೋಂಕಿತ ವ್ಯಕ್ತಿಗಳು ತಮ್ಮ ಸಾಕು ಪ್ರಾಣಿಗಳನ್ನು ದೂರ ಇಡುವುದು ಅಗತ್ಯ ಎಂದು ಸಂಶೋಧಕರು ತಿಳಿಸಿದ್ದಾರೆ

error: Content is protected !!