ಕೂಗು ನಿಮ್ಮದು ಧ್ವನಿ ನಮ್ಮದು

ರಾಜ್ಯಾದ್ಯಂತ ಇಪ್ಪತ್ತಕ್ಕೂ ಹೆಚ್ಚು ಕಡೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶ: ಕೆಲ ದಿನ ರಾಜ್ಯದಲ್ಲೇ ವಾಸ್ತವ್ಯ?

ಹೊಸ ದಿಲ್ಲಿ: ಚುನಾವಣೆಗೆ ಸಜ್ಜಾಗಿರುವ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 20ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚುನಾವಣಾ ಪ್ರಚಾರ ಅಖಾಡದಲ್ಲಿ ಬಿಜೆಪಿಯ ನಂಬರ್ 1 ಸ್ಟಾರ್ ಪ್ರಚಾರಕ ಆಗಿರುವ ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಸಾಧ್ಯವಾದಷ್ಟೂ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ಮೇ 10 ರಂದು ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಈ ವೇಳೆ ಮೇ 6 ರಿಂದ ಮೇ 8ರವರೆಗೆ ಪ್ರಧಾನಿ ಮೋದಿ ಕರ್ನಾಟಕ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಪ್ರಚಾರ ನಡೆಸುವ ಸಾಧ್ಯತೆಗಳಿವೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರಧಾನಿ ಮೋದಿ ಟಕ್ಕರ್ ಕೊಡಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಣಗಳ ಬಡಿದಾಟ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತು ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದು ಅಧಿಕಾರ ಹಿಡಿಯಬೇಕೆಂದರೆ ಮೋದಿ ಮ್ಯಾಜಿಕ್‌ನಿಂದ ಮಾತ್ರ ಸಾಧ್ಯ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ರಾಜ್ಯದ ಒಟ್ಟು 6 ಪ್ರಾಂತ್ಯಗಳ ಪೈಕಿ ಪ್ರತಿ ಪ್ರಾಂತ್ಯದಲ್ಲೂ ತಲಾ ಮೂರು ಸಮಾವೇಶಗಳನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪ್ರಾಂತ್ಯದಲ್ಲಿ ಪ್ರಧಾನಿ ಮೋದಿ ಹೆಚ್ಚು ಸಮಾವೇಶಗಳನ್ನು ನಡೆಸಲಿದ್ದಾರೆ.

ಹಾಗೆ ನೋಡಿದರೆ ಹೈದರಾಬಾದ್ ಕರ್ನಾಟಕ ಪ್ರದೇಶವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಖಾಡವಾಗಿದ್ದು, ಈ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಬಲ ನಾಯಕರು. ಕಳೆದ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಕೇವಲ 15 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ಸಿಎಂ ಬೊಮ್ಮಾಯಿ ಸರ್ಕಾರದ ಕೆಲವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ, ಪ್ರಧಾನಿ ಮೋದಿ ಅವರ ಪ್ರಚಾರದ ಬಲ ಬಿಜೆಪಿಗೆ ಅತ್ಯಗತ್ಯವಾಗಿ ಬೇಕಾಗಿದೆ. ಸ್ಥಳೀಯ ಸಮಸ್ಯೆಗಳು ಹಾಗೂ ಬಿಜೆಪಿಯ ಅಭಿವೃದ್ದಿ ಕಾರ್ಯಗಳನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ಸಮಾವೇಶಗಳನ್ನು ನಡೆಸಲಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಈಗಾಗಲೇ 7 ಸಮಾವೇಶಗಳನ್ನು ಪ್ರಧಾನಿ ಮೋದಿ ನಡೆಸಿದ್ದಾರೆ. ಹುಬ್ಬಳ್ಳಿ, ಮಂಡ್ಯ ಸೇರಿದಂತೆ ಹಲವೆಡೆ ಈಗಾಗಲೇ ಸಮಾವೇಶಗಳು ನಡೆದಿವೆ.

ಸ್ವಪಕ್ಷೀಯರ ವಿರುದ್ಧವೇ ಭ್ರಷ್ಟಾಚಾರ ಆರೋಪ ಕೇಳಿ ಬಂದರೆ ಸರ್ಕಾರ ಸುಮ್ಮನೆ ಬಿಡೋದಿಲ್ಲ ಎಂಬ ಸಂದೇಶವನ್ನು ಬಿಜೆಪಿಯ ಕೇಂದ್ರ ನಾಯಕರು ರವಾನಿಸುತ್ತಿದ್ದಾರೆ. ಜೊತೆಯಲ್ಲೇ ಕುಟುಂಬ ರಾಜಕಾರಣಕ್ಕೂ ಸೊಪ್ಪು ಹಾಕೋದಿಲ್ಲ ಎಂಬ ಸಂದೇಶವನ್ನೂ ರವಾನಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸ್ಥಳೀಯ ನಾಯಕನಾಗಿ ಬಿಂಬಿತವಾಗಿರುವ ಯಡಿಯೂರಪ್ಪ ಕೂಡಾ ಪ್ರಚಾರ ಅಖಾಡದಲ್ಲಿ ಸಾಥ್ ನೀಡುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪ್ರಚಾರ ಕಣ ರಂಗೇರಿದೆ

error: Content is protected !!