ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಭೇಟಿ ನೀಡಿ ಜನರ ಅಹವಾಲು ಆಲಿಸಿದರು.
ಅಂಬೇವಾಡಿ, ಗೋಜಗಾ, ಮಣ್ಣೂರ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಗೆ ಅವರ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರವಾಹದಿಂದಾಗಿ ಮನೆಗಳು, ಸೇತುವೆಗಳು, ರಸ್ತೆಗಳು, ಹೊಲಗದ್ದೆಗಳು ಸಂಪೂರ್ಣ ನಾಶವಾಗಿದ್ದರ ಬಗ್ಗೆ ಮಾಹಿತಿಯನ್ನು ಪಡೆದು ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ ಯಾರೂ ಧೃತಿಗೆಡಬೇಕಾಗಿಲ್ಲ, ನಿಮ್ಮೊಂದಿಗೆ ನಾವಿದ್ದೇವೆ. ಸರಕಾರದ ಕಣ್ಣು ತೆರೆಸುವ ಕೆಲಸವನ್ನು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಆದರೆ 2 -3 ಬಾರಿ ಪ್ರಕೃತಿ ವಿಕೋಪದಿಂದಾಗಿ ಮಾಡಿದ ಕೆಲಸಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿವೆ. ಆದರೂ ಯಾರೂ ಹೆದರಬೇಕಾಗಿಲ್ಲ. ಮುಂದೆ ನಮ್ಮದೇ ಸರಕಾರ ಬರಲಿದ್ದು, ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಶಾಸಕ ಅಶೋಕ ಪಟ್ಟಣ, ಶಾಸಕಿ ಅಂಜಲಿ ನಿಂಬಾಳ್ಕರ್, ಮಹಾಂತೇಶ ಮತ್ತಿಕೊಪ್ಪ, ವಿನಯ ನಾವಲಗಟ್ಟಿ, ಮೃಣಾಲ ಹೆಬ್ಬಾಳಕರ್, ಅಡಿವೇಶ ಇಟಗಿ, ರಾಮನಗೌಡ ಪಾಟೀಲ, ತಹಸಿಲ್ದಾರ್ ಕುಲಕರ್ಣಿ, ಸ್ಥಳೀಯ ಜನಪ್ರತಿನಿಧಿಗಳು, ಪೋಲಿಸ್ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.