ಕೂಗು ನಿಮ್ಮದು ಧ್ವನಿ ನಮ್ಮದು

ಅವರೇ ಉತ್ತರ ಕೊಡಬೇಕು’: ವಿರಾಟ್‌ ಕೊಹ್ಲಿ ಟೆಸ್ಟ್‌ ನಾಯಕತ್ವ ತೊರೆದ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ

ಭಾರತ ಟೆಸ್ಟ್ ತಂಡದ ನಾಯಕತ್ವ ತೊರೆಯುವ ವಿರಾಟ್‌ ಕೊಹ್ಲಿಯ ನಿರ್ಧಾರಕ್ಕೆ ಬಿಸಿಸಿಐ ಬೆಂಬಲ ಇರಲಿಲ್ಲ. ಆದರೆ, ಇದು ಸಂಪೂರ್ಣವಾಗಿ ವಿರಾಟ್ ಕೊಹ್ಲಿಯ ವೈಯಕ್ತಿಕ ನಿರ್ಧಾರ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ 209 ರನ್‌ಗಳಿಂದ ಸೋಲು ಅನುಭವಿಸಿತು. ಇದರ ಬೆನ್ನಲ್ಲೆ ರೋಹಿತ್‌ ಶರ್ಮಾ ನಾಯಕತ್ವದ ಬಗ್ಗೆ ಟೀಕೆಗಳು ವ್ಯಕ್ತವಾದವು. ವಿರಾಟ್‌ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಮರಳಬೇಕೆಂದು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕನಾಗಿ ವಿರಾಟ್‌ ಕೊಹ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಆಡಿದ 68 ಟೆಸ್ಟ್ ಪಂದ್ಯಗಳಲ್ಲಿ 40ರಲ್ಲಿ ಗೆಲುವು ಹಾಗೂ 11ರಲ್ಲಿ ಡ್ರಾನಲ್ಲಿ ಅಂತ್ಯ ಕಂಡಿವೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇತಿಹಾಸದಲ್ಲಿ ವಿರಾಟ್‌ ಕೊಹ್ಲಿ ನಾಲ್ಕನೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.

ಆಜ್‌ ತಕ್‌ ಸಂದರ್ಶನದಲ್ಲಿ ಮಾತನಾಡಿದ ಸೌರವ್‌ ಗಂಗೂಲಿ, “ವಿರಾಟ್‌ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆಯಲು ಬಿಸಿಸಿಐ ಸಿದ್ದತೆ ನಡೆಸಿರಲಿಲ್ಲ. ದಕ್ಷಿಣ ಅಫ್ರಿಕಾ ಪ್ರವಾಸದ ಬಳಿಕ ಇದು ಅನಿರೀಕ್ಷಿತ ಬೆಳವಣಿಗೆಯಾಗಿದೆ. ಇದಕ್ಕೆ ಕಾರಣವೇನೆಂದು ಸ್ವತಃ ವಿರಾಟ್‌ ಕೊಹ್ಲಿಯೇ ಬಹಿರಂಗಪಡಿಸಬೇಕು. ಇದರ ಬಗ್ಗೆ ಈಗ ನಾವು ಮಾತನಾಡುವುದು ಸರಿಯಲ್ಲ, ಏಕೆಂದರೆ ವಿರಾಟ್‌ ಕೊಹ್ಲಿ ಟೆಸ್ಟ್‌ ನಾಯಕತ್ವದ ಈಗಾಗಲೇ ತೊರೆದಿದ್ದಾರೆ. ಅಂದಹಾಗೆ ಆ ಸಮಯದಲ್ಲಿ ಟೆಸ್ಟ್‌ ನಾಯಕತ್ವಕ್ಕೆ ರೋಹಿತ್‌ ಶರ್ಮಾ ಉತ್ತಮ ಆಯ್ಕೆಯಾಗಿತ್ತು,” ಎಂದು ಹೇಳಿದ್ದಾರೆ.

2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಲೀಗ್‌ ಹಂತದಲ್ಲಿಯೇ ಹೊರ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಆ ಮೂಲಕ ತಮ್ಮ ಮೇಲನ ಕಾರ್ಯಭಾರವನ್ನು ಇಳಿಸಿಕೊಡಿದ್ದರು ಹಾಗೂ ಏಕದಿನ ಹಾಗೂ ಟೆಸ್ಟ್‌ ತಂಡಗಳ ನಾಯಕತ್ವದಲ್ಲಿ ಮುಂದುವರಿಯಲು ನಿರ್ಧರಿಸಿದ್ದರು.

ಆದರೆ, ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವೈಟ್‌ ಬಾಲ್‌ ಕ್ರಿಕೆಟ್‌ಗೆ ಒಬ್ಬರೇ ನಾಯಕರಿರಬೇಕೆಂಬ ಕಾರಣಕ್ಕೆ ಬಿಸಿಸಿಐ ರೋಹಿತ್‌ ಶರ್ಮಾ ಅವರಿಗೆ ನಾಯಕತ್ವ ನೀಡಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ವಿರಾಟ್‌ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಸೋಲಿನ ಬಳಿಕ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗೆ ತಿರುಗೇಟು ನೀಡಿದ್ದರು.

ಇದಾದ ಬಳಿಕ ರೋಹಿತ್‌ ಶರ್ಮಾ ಅವರನ್ನು ಎಲ್ಲಾ ಸ್ವರೂಪದ ಭಾರತ ತಂಡಕ್ಕೆ ನಾಯಕನ್ನಾಗಿ ಬಿಸಿಸಿಐ ನೇಮಿಸಿತ್ತು. ಆದರೆ, ರೋಹಿತ್‌ ಶರ್ಮಾ ನಾಯಕತ್ವದಲ್ಲಿಯೂ ಟೀಮ್‌ ಇಂಡಿಯಾ 2022ರ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಇದಾದ ಬಳಿಕ ಹಾರ್ದಿಕ್‌ ಪಾಂಡ್ಯಗೆ ಟಿ20 ನಾಯಕತ್ವ ನೀಡಲಾಗಿದೆ.

ಇದೀಗ ರೋಹಿತ್‌ ಶರ್ಮಾ ನಾಯಕತ್ವದಲ್ಲಿಯೂ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿತು. ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ಅವರನ್ನು ಟೆಸ್ಟ್ ನಾಯಕತ್ವದಲ್ಲಿ ಮುಂದುವರಿಸಲಾಗುವುದೆ ಅಥವಾ ಕೈ ಬಿಡಲಾಗುವುದೆ ಎಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ

error: Content is protected !!