ಮೈಸೂರು: ಪ್ರೀತಿ ಮಾಡಿ ಮದುವೆಯಾದ ಮಗಳ ತಾಳಿ ಕಿತ್ತು ಹಾಕಿ, ಜುಟ್ಟು ಹಿಡಿದು ಧರ ಧರನೇ ಎಳೆದೊಯ್ಯಲು ತಂದೆ ಯತ್ನಿಸಿರುವ ಘಟನೆಯು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸಂಭವಿಸಿದೆ. ನಂಜನಗೂಡು ತಾಲೂಕು ಹರತಲೆ ಗ್ರಾಮದ ಯುವತಿ ಹಲ್ಲರೆ ಗ್ರಾಮದ ಮಹೇಂದ್ರ ಎಂಬವರನ್ನು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿದ್ದಳು. ಬಳಿಕ ಡಿಸೆಂಬರ್ ಎಂಟರಂದು ಮದುವೆಯಾಗಿದ್ದಾರೆ.
ಇನ್ನೂ ನಂತರ ನಂಜನಗೂಡಿನ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹವನ್ನ ನೊಂದಾಯಿಸಿಕೊಳ್ಳಲು ಬಂದಿದ್ದಾರೆ. ನೋಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರಗಡೆಗೆ ಬರುತ್ತಿದ್ದಂತೆಯೇ ಯುವತಿ ತಂದೆ ಬಸವರಾಜ ನಾಯ್ಕ್ ಪ್ರತ್ಯಕ್ಷವಾಗಿ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಹಾಕಿ ಜುಟ್ಟು ಹಿಡಿದು ಮನೆಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವವನಿಕರು ಮಧ್ಯೆ ಪ್ರವೇಶಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಜೊತೆಗೆ ಯುವತಿ ತನ್ನ ತಂದೆಯಿಂದಲೇ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.