- ಗೋಸಾಯಿ ಮಹಾ ಸಂಸ್ಥಾನ ಮಠದಲ್ಲಿ ನಡೆದ ಗುರು ಪೂರ್ಣಿಮೆ ಸಮಾರಂಭದಲ್ಲಿ ಹೇಳಿಕೆ
ಬೆಂಗಳೂರು: ಮರಾಠ ಸಮಾಜ ನನ್ನನ್ನು ಮನೆ ಮಗಳಂತೆ ಕಂಡಿದೆ. ನಾನು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದರೂ ಮರಾಠ ಸಮಾಜ ನನ್ನನ್ನು ಮನೆ ಮಗಳಂತೆ ನೋಡುತ್ತಾ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಂಗಳೂರಿನ ಗವಿಪುರಂನಲ್ಲಿರುವ ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ಮರಾಠ ಸಮಾಜ. ಇಂಥ ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ಪುಣ್ಯ ಎಂದರು.
ಉತ್ತರ ಕರ್ನಾಟಕದ ಭಾಗದ ಜನರ ಮಾತು ಒರಟಾಗಿದ್ದರೂ ಮನಸ್ಸು ಮೃದುವಾಗಿರುತ್ತದೆ. ನಾನು ಉತ್ತರ ಕರ್ನಾಟಕದ ಹೆಣ್ಣುಮಗಳು ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸಾಕಷ್ಟು ಜನಪ್ರಿಯಗೊಂಡಿವೆ. ಅದ್ರಲ್ಲೂ ನನ್ನ ಇಲಾಖೆ ವ್ಯಾಪ್ತಿಯ ಗೃಹ ಲಕ್ಷ್ಮಿ ಯೋಜನೆಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು. ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಂಎಲ್ಸಿ ಯು.ಬಿ.ವೆಂಕಟೇಶ್, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ಕಲಾವಿದ ಗಣೇಶ್ ಕೇಸರ್ಕರ್ ಸೇರಿದಂತೆ ಮರಾಠ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.