ಮಂಗಳೂರು: ತಂದೆ ಪುತ್ರನನ್ನು ಮನೆಯೊಳಗೆ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಗಳೂರು ತಾಲೂಕಿನ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆಗುತ್ತು ಪ್ರದೇಶದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ತಂದೆ ವಿಶ್ವನಾಥ ಶೆಟ್ಟಿ ಎಂಬುವವರು ಮಗ ಸ್ವಾಮಿತ್ ಶೆಟ್ಟಿ (25)ಗೆ ಬೆಂಕಿ ಹಚ್ಚಿದ್ದಾರೆ. ಸ್ವಾಮಿತ್ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಹೈನುಗಾರಿಕೆ ನಡೆಸುತ್ತಿದ್ದರು. ದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು.ಅಪ್ಪ, ಮಗನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆಯಿತು. ಪುತ್ರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತಂದೆ ಹಲ್ಲೆಗೈದಿದ್ದಾನೆ. ಮಗನನ್ನು ಮನೆಯೊಳಗೆ ಕೂಡಿ ಹಾಕಿ ಚಿಲಕ ಹಾಕಿದ್ದ ತಂದೆ, ಪುತ್ರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸುಟ್ಟಗಾಯಗಳಿಂದ ಬಳಲುತ್ತಿರುವ ಸ್ವಾಮಿತ್ ಶೆಟ್ಟಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಕನಾಡಿ ನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.