ಧಾರವಾಡ: ಮಹದಾಯಿ ನದಿ ತಿರುವು ಯೋಜನೆ ಉತ್ತರ ಕರ್ನಾಟಕದ ಮಹತ್ವದ ಯೋಜನೆ. ಈ ನೀರಿಗಾಗಿ ನಾಲ್ಕು ಜಿಲ್ಲೆಗಳ ರೈತರು ವರ್ಷಾನುಗಟ್ಟಲೇ ಹೋರಾಟ ಮಾಡುತ್ತಲೇ ಬಂದಿದ್ದರು. ಆದರೆ, ಕೆಲ ದಿನಗಳ ಹಿಂದಷ್ಟೇ ಕೇಂದ್ರ ಜಲ ಆಯೋಗ ಕರ್ನಾಟಕದ ಡಿಪಿಆರ್ಗೆ ಗ್ರೀನ್ ಸಿಗ್ನಲ್ ನೀಡಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರಕಾರ ಸುಪ್ರೀಂ ಕೋರ್ಟ್ಗೆ ಹೋಗಿತ್ತು. ಆದರೆ, ಗೋವಾ ಸರಕಾರಕ್ಕೆ ಅಲ್ಲಿಯೂ ಸೋಲುಂಟಾಗಿದ್ದರಿಂದ ಹೋರಾಟಗಾರರಿಗೆ ಮತ್ತು ಕರ್ನಾಟಕ ಸರಕಾರಕ್ಕೆ ದೊಡ್ಡ ಜಯ ಸಿಕ್ಕಂತಾಗಿತ್ತು. ಇನ್ನೇನು ಕಾಮಗಾರಿಯನ್ನು ರಾಜ್ಯ ಸರಕಾರ ಶುರು ಮಾಡಿಯೇ ಬಿಡುತ್ತೆ ಅನ್ನುವಾಗಲೇ ಮತ್ತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಮಸ್ಯೆ ಶುರುವಾಗಿದೆ.
ಅರಣ್ಯ ಬಳಕೆಗೆ ಒಪ್ಪಿಗೆ ಪಡೆಯಲು ಹೊಸ ಪ್ರಸ್ತಾವನೆ ಸಲ್ಲಿಸಿದ ರಾಜ್ಯ ಸರ್ಕಾರ ಹೌದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಸಿಗದ ಹೊರತು ಈ ಯೋಜನೆ ಆರಂಭಿಸಲು ಸಾಧ್ಯವಿಲ್ಲ. ಈ ಯೋಜನೆಗೆ ಅತ್ಯಗತ್ಯವಾಗಿ ಬೇಕಿರೋ 26.92 ಹೆಕ್ಟೇರ್ ಅರಣ್ಯ ಬಳಕೆಗೆ ಒಪ್ಪಿಗೆ ಪಡೆಯಲು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಇದೀಗ ರಾಜ್ಯ ಸರಕಾರ ಹೊಸ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಯೋಜನೆಗೆ ಸಂಬಂಧಿಸಿದಂತೆ ಅನುಮತಿಗಾಗಿ ಮೇ 31 ರಂದು ಹೊಸ ಪ್ರಸ್ತಾವನೆ ಸಲ್ಲಿಸಿದ್ದು, ಈ ಮುಂಚೆ ಎಲ್ಲ ಕಡೆಯಿಂದ ಅನುಮತಿ ಸಿಕ್ಕಿದೆ ಎಂದು ಬಿಜೆಪಿ ಸರಕಾರ ಹೇಳಿತ್ತು. ಆದರೆ, ಇದೀಗ ರಾಜ್ಯ ಸರಕಾರ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ್ದು ನೋಡಿದರೆ ಬೇರೆ ಬೇರೆ ಅನುಮಾನಗಳು ಸೃಷ್ಟಿಯಾಗಿವೆ.
ಈ ಮುಂಚೆ ಯೋಜನೆಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಅದರಲ್ಲೂ ಗೋವಾ ಸರಕಾರ ಪ್ರತಿ ಹಂತದಲ್ಲಿಯೂ ಈ ಯೋಜನೆಗೆ ವಿರೋಧ ವ್ಯಕ್ತಪಡಿಸೋದಲ್ಲದೇ ಪದೇ ಪದೇ ಆಕ್ಷೇಪಣೆಗಳನ್ನು ಸಲ್ಲಿಸುತ್ತಲೇ ಬಂದಿತ್ತು. ಎಲ್ಲ ಸಮಸ್ಯೆಗಳನ್ನು ಮಿರಿ ಕೊನೆಗೂ ಈ ಯೋಜನೆಗೆ ಅನುಮತಿ ಸಿಕ್ಕಿತ್ತು. ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ಪಡೆಯಲು ಅರಣ್ಯ ಇಲಾಖೆಯ ಮೂಲಕ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸೋ ಮೂಲಕ ಈ ಮೂಲಕ ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಗೋವಾ ಸರ್ಕಾರಕ್ಕೆ ಸಂದೇಶ ರವಾನಿಸಿದೆ. ಇನ್ನು ಇದೀಗ ಹೊಸ ಪ್ರಸ್ತಾವನೆ ಸಲ್ಲಿಸಿದ್ದರಿಂದ ಹಿಂದಿನ ಸರಕಾರ ಮಾಡಿದ ಕೆಲಸವೇನು ಎನ್ನುವುದು ಬಯಲಿಗೆ ಬಂದಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಭಿಪ್ರಾಯವಾಗಿದೆ.
ಕರ್ನಾಟಕಕ್ಕೆ ಟ್ರಿಬ್ಯುನಲ್ನಲ್ಲಿ 13.7 ಟಿಎಂಸಿ ಕೊಟ್ಡಿದ್ದರೂ ಅದರಲ್ಲಿ ಧಾರವಾಡ, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ 14 ತಾಲೂಕಿನ ಜನರಿಗೆ ಕುಡಿಯಲು ನೀರು ಮಾತ್ರ ಆದೇಶ ಆಗಿದೆ. ಉಳಿದಂತೆ 8.2 ಟಿಎಂಸಿ ಪಾವರ್ ಪ್ರಾಜೆಕ್ಟ್ಗಾಗಿ ಇದೆ. 1.5 ಟಿಎಂಸಿ ನದಿ ಪಾತ್ರದ ಜನರ ಬಳಕೆಗೆ ಆದೇಶ ಇದೆ. ಸದ್ಯ ಕೃಷಿಗೆ ನೀರಿನ ಆದೇಶ ಆಗಿಲ್ಲ. ಮೊದಲಿನ ಡಿಪಿಆರ್ ಪ್ರಕಾರ ಈ ಯೋಜನೆಯಿಂದಾಗಿ ಒಂದೂವರೆ ಸಾವಿರ ಹೆಕ್ಟೇರ್ ನಷ್ಟು ಅರಣ್ಯಕ್ಕೆ ಹಾನಿಯಾಗೋ ಸಾಧ್ಯತೆ ಇತ್ತು. ಹೀಗಾಗಿ ಅದಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿರಲಿಲ್ಲ. ಬಳಿಕ ಯೋಜನೆಯನ್ನು ಬದಲಿಸಿ, ಪೈಪ್ ಲೈನ್ ಮೂಲಕ ನಾಲೆಗಳ ನೀರನ್ನು ಸೇರಿಸುವ ಪ್ಲ್ಯಾನ್ ಮಾಡಿದರು. ಇದರಿಂದ ಕಡಿಮೆ ಅರಣ್ಯ ನಾಶವಾಗುತ್ತೆ. ಹೀಗಾಗಿ ಈ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ನೀಡಿದೆ. ಇದೀಗ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿದರೆ ಕಾಮಗಾರಿ ಆರಭವಾಗೋ ಆಸೆ ಹುಟ್ಟಿಕೊಂಡಿದೆ. ಆಗ ಮಾತ್ರ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತೆ.