ಕೂಗು ನಿಮ್ಮದು ಧ್ವನಿ ನಮ್ಮದು

ನಮ್ಮ ನಾಯಕರು, ಮುಖಂಡರು ಅಗ್ರೇಸಿವ್ ಆಗಿ ಮಾತನಾಡುತ್ತಿಲ್ಲ: ಬಿಜೆಪಿ ಸಚಿವ ಮಾಧುಸ್ವಾಮಿ

ತುಮಕೂರು: ನೇರ ನಿಷ್ಠೂರು ಮಾತಿನ ಖ್ಯಾತಿಯ ಸಚಿವ ಮಾಧುಸ್ವಾಮಿ ಮಾತುಗಳು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿವೆ. ಸಚಿವ ಮಾಧುಸ್ವಾಮಿ ಈ ಹಿಂದೆ ಸರ್ಕಾರವನ್ನು ನಡೆಯುತ್ತಿಲ್ಲ, ನಾವೇ ಮ್ಯಾನೇಜ್ ಮಾಡ್ತೀವಿ ಅಂತ ಹೇಳಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದರು, ಇದೀಗ ಬಿಜೆಪಿ ನಾಯಕರು, ಮುಖಂಡರು ಅಗ್ರೇಸಿವ್ ಆಗಿ ಮಾತನಾಡುತ್ತಿಲ್ಲ ಅಂತ ಹೇಳುವ ಮೂಲಕ ಬಿಜೆಪಿ ಸಮರ್ಥವಾಗಿ ಶಕ್ತಿ ಪ್ರದರ್ಶನ ಮಾಡ್ತಿಲ್ಲ ಅನ್ನೋ ದಾಟಿಯಲ್ಲಿ ಮಾತನಾಡಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ವಿಜಯಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕರು ಸರಿಯಾಗಿ ಟಕ್ಕರ್ ಕೊಡುತ್ತಿಲ್ಲ, ಹಾಗಾಗಿ ಬಿಜೆಪಿಗೆ ಹಿನ್ನಡೆ ಆಗುತಿದೆ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ.

ನಾವೆಲ್ಲಾ ಇವತ್ತು ಮತ್ತೇ ಸರಕಾರ ತರಲೇ ಬೇಕು, ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ. ಯಾರೋ ಬಾಯಿಗೆ ಬಂದಹಾಗೆ ಸರ್ಕಾರದ ವಿರುದ್ದ ಮಾತಾಡಿದಾಗ ನಾವೇ ಜಿಜ್ಞಾಸೆಗೆ ಒಳಗಾಗುತಿದ್ದೇವೆ. ನೀವೇನು ಎಂದು ನಾವು ವಾಪಸ್ ಕೇಳುತ್ತಿಲ್ಲ. ವಿರುದ್ದ ಮಾತಾಡಿದವರಿಗೆ ಮರು ಪ್ರಶ್ನೆ ಹಾಕಲ್ಲ, ನಾವು ಕಾಂಗ್ರೆಸ್ ನವರ ರೀತಿ ಅಗ್ರೇಸಿವ್‌ ಆಗಿ ಮಾತನಾಡುತ್ತಿಲ್ಲ, ಸದ್ಯ ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಯನ್ನು ಹೇಳಿಕೊಳ್ಳಬೇಕಾಗಿದೆ. ಹೀಗಾಗಿ ಅವರು ಬಾಯಿ ಮುಚ್ಚಿಕೊಳ್ತಾರೆ, ವಿರೋಧಿಗಳನ್ನು ಆಡೋಕೆ ಬಿಟ್ಟರೆ ಅವರು ಆಡ್ತಾನೆ ಇರುತ್ತಾರೆ. ಅಮಾಯಕ ಜನರಿಗೆ ವಿರೋಧಿಗಳು ಹೇಳೋದೆ ಸತ್ಯ ಎನಿಸುತ್ತದೆ. ಕೋರ್ಟ್ ನಲ್ಲಿ ಎದುರು ಪಾರ್ಟಿ ವಿಚಾರಣೆಗೆ ಹಾಜರಾಗದೇ ಇದ್ರೆ. ಇನ್ನೊಂದು ಪಾರ್ಟಿ ಪರ ಆದೇಶ ಆಗುತ್ತದೆ, ನಮ್ಮ ಪಕ್ಷದಲ್ಲಿ ಎಕ್ಸ್ ಪಾರ್ಟಿ ಡಿಸಿಷನ್ ಆಗಬಾರದು ಎಂದಿದ್ದಾರೆ.

ಮುಂದುವರೆದ ಮಾತನಾಡಿದ ಮಾಧುಸ್ವಾಮಿ, ಹಗಲು ಕಳ್ಳರು….ಬೆಳಗ್ಗೆ ಕನ್ನ ಹಾಕಿದವರು…ರಾತ್ರಿ ಕಳ್ಳನ ಬಗ್ಗೆ ಮಾತಾಡುತಿದ್ದಾರೆ. ಕಾಂಗ್ರೆಸ್ ನವರೇ ಹಗಲು ಗಳ್ಳರು ಇವರು ನಮ್ಮ ಸುದ್ದಿ ಮಾತಾಡೋ ಸ್ಥಿತಿ ನಿರ್ಮಾಣ ಆಗಿದೆ ಎಂದರು.

ಚಿಕ್ಕನಾಯಕನಹಳ್ಳಿಯಲ್ಲಿ ಅಭಿವೃದ್ಧಿ ಪದದ ಕಾಗುಣಿತ ಗೊತ್ತಿಲ್ಲದ ವ್ಯಕ್ತಿ ನನ್ನ ಎದುರಾಳಿ, ಹಾಗಾಗಿ ನಾನು ಸಿದ್ದರಾಮಯ್ಯನವರ ಬಳಿ ಕೇಳಿದ್ದೇನೆ. ನೀವೇ‌ ಚಿಕ್ಕನಾಯಕನಹಳ್ಳಿಯಿಂದ ಬಂದು ಸ್ಪರ್ಧೆ ಮಾಡಿ ಎಂದು. ಆಗ‌ ಸಮಬಲದ ಹೋರಾಟ ನಡೆಯುತ್ತದೆ,ಇಬ್ಬರೂ ಸೆಣಸಾಡಲು ಗೌರವ ಇರುತ್ತದೆ. ಇಬ್ಬರು ಸರಿಯಾಗಿ ಕುಸ್ತಿ ಆಡಬಹುದು. ಏನೂ ಗೊತ್ತಿಲ್ಲದವರ ಜೊತೆ ನಾನು ಸ್ಪರ್ಧೆ ಮಾಡೋಕೆ ನಿಂತಿದ್ದು ಯಾವ ಜನ್ಮದ ಪಾಪನೋ. ಇಂಥಹ ಕೆಟ್ಟ ಸ್ಥಿತಿ ನನಗೆ ಬರಬಾರದಿತ್ತು ಅನ್ನೂ ಮೂಲಕ ಎದುರಾಳಿ ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ತನ್ನ ಸರಿಸಮಾನನಲ್ಲ ಎಂದು ಮಾಧುಸ್ವಾಮಿ ಹೇಳಿದರು.

ಜೆ.ಡಿ.ಎಸ್ ವಿರುದ್ದವೂ ಗುಡುಗಿದ ಮಾಧುಸ್ವಾಮಿ:
ದೇವೇಗೌಡರು ತುಮಕೂರಿಗೆ ಹೇಮಾವತಿ ನೀರನ್ನು ಕೊಡದೇ ಮೋಸ ಮಾಡಿದವರು, ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಹೇಳಿಕೆಯ ಹಳೇಯ ಪೇಪರ್ ಕಟಿಂಗ್ ತೋರಿಸಿದ್ದೇ, ಹಾಗಾಗಿಯೇ ಜಿಲ್ಲೆಯ ಜನರು ದೇವೇಗೌಡರನ್ನು ಸೋಲಿಸಿದರು. ಇಷ್ಟೆಲ್ಲಾ ಮಾಡಿಯೂ ಕುಮಾರಸ್ವಾಮಿಯವರು ಚಿಕ್ಕನಾಯಕನಹಳ್ಳಿಗೆ ಟೂರ್ ಹಾಕ್ತಾರೆ. ಮಾನಾ ಮರ್ಯಾದೆ ಇದ್ದವರು ಯಾರಾದರೂ ಚಿಕ್ಕನಾಯಕನಹಳ್ಳಿಗೆ ಬರಬಹುದಾ ಎಂದು ಪ್ರಶ್ನಿಸಿದರು.

ಇಲ್ಲಿಗೆ ಬಂದು ನನ್ನ ವಿರುದ್ದ ಮಾತಾಡುತ್ತಾರೆ. ಪಂಚರತ್ನ ಯಾತ್ರೆಯಲ್ಲಿ ನನ್ನ ವಿರುದ್ದ ಭಾಷಣ ಮಾಡುತ್ತಾರೆ. ತಾಲೂಕು ಅಭಿವೃದ್ಧಿ ಆಗಿಲ್ಲ ಅಂತೆ. ನಾನು ಅಭಿವೃದ್ಧಿ ಆಗಿದಿನಿ ಅಂತೆ. ಹೊಳೆನರಸೀಪುರದಲ್ಲಿ ಇವರಪ್ಪಗೆ 50 ರೂ ಕೊಟ್ಟು ಕಂಟ್ರಾಕ್ಟರ್ ಕೆಲಸ ಶುರುಮಾಡಿದ್ದು ಯಾರು. ನನಗೆನೂ ಆಸ್ತಿ ಕೊರತೆ ಇರಲಿಲ್ಲ,ನಮ್ಮಪ್ಪ ಚೆನ್ನಾಗಿ ಇಟ್ಟಿದ್ದ,‌ ನಮ್ಮಪ್ಪ ನಮ್ಮಜ್ಜ‌ ಚೆನ್ನಾಗಿ ಬಾಳಿದವರೇ. ಇವ್ರಂಗೆ ದೋಚಿದ್ದು ಬಾಚಿದ್ದು ಪ್ರಕರಣಗಳು ನಮ್ಮಗಿಲ್ಲ, ಅಪ್ಪ ಮಕ್ಕಳು ಮೊಮ್ಮಕ್ಕಳು ಎಲ್ಲಾ ದೋಚೋಕೆ ಶುರುಮಾಡಿದವರು ಎಂದು ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಹರಿಹಾಯ್ದರು.

error: Content is protected !!