ಬೆಂಗಳೂರು (ಜೂನ್ 10): ಕರ್ನಾಟಕದಲ್ಲಿ ಸದ್ಯಕ್ಕೆ ಜಾರಿಯಲ್ಲಿರುವ ಲಾಕ್ಡೌನ್ ಜೂನ್ 14ರಂದು ತೆರವುಗೊಳ್ಳಲಿದೆ. ಇದಾದ ಬಳಿಕ ಅನ್ಲಾಕ್ ಮಾಡಬೇಕಾ? ಅಥವಾ ಲಾಕ್ಡೌನ್ ವಿಸ್ತರಣೆ ಮಾಡಬೇಕಾ? ಎಂಬುದು ಸರ್ಕಾರದ ಮುಂದಿರುವ ಅತಿದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ, ಇಂದು 8 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯಾ ಜಿಲ್ಲೆಗಳ ಕೊರೋನಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಂದು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿರುವ ಯಡಿಯೂರಪ್ಪ ಅನ್ಲಾಕ್ ಬಗ್ಗೆ ಇಂದು ಸಂಜೆಯೊಳಗೆ ನಿರ್ಧಾರ ಮಾಡುವ ಸಾಧ್ಯತೆಯಿದೆ. 8 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಲಾಕ್ಡೌನ್ ವಿಸ್ತರಣೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಮನವಿ ಮಾಡಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ಬೆಳಗಾವಿ, ಯಾದಗಿರಿ ಸೇರಿದಂತೆ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಜೂನ್ 20ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲು ಮನವಿ ಮಾಡಿದ್ದಾರೆ. ಇಂದು ಸಂಜೆ ಇನ್ನೊಂದು ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಲಾಕ್ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಲಾಕ್ ಡೌನ್ ಬದಲಾಗಿ ಟೆಸ್ಟಿಂಗ್ ಜಾಸ್ತಿ ಮಾಡಿ ಎಂದು ಸಲಹೆ ನೀಡಿದ ಸಿಎಂ ಯಡಿಯೂರಪ್ಪ ಟೆಸ್ಟಿಂಗ್ ಜೊತೆಗೆ ಬಿಗಿ ಯಾದ ಕ್ರಮಗಳನ್ನು ಜಾರಿ ಮಾಡಿ ಎಂದು ಸೂಚಿಸಿದ್ದಾರೆ. ಎಲ್ಲರಿಂದ ಅಭಿಪ್ರಾಯ ಪಡೆದು ಲಾಕ್ ಡೌನ್ ವಿಸ್ತರಣೆ ಮಾಡಬೇಕಾ? ಅಥವಾ ಅನ್ ಲಾಕ್ ಮಾಡಬೇಕಾ? ಎಂಬುದರ ಬಗ್ಗೆ ಸಿಎಂ ನಿರ್ಧಾರ ಮಾಡಲಿದ್ದಾರೆ. ಕೆಲವು ಜಿಲ್ಲಾಧಿಕಾರಿಗಳು ಲಾಕ್ ಡೌನ್ ವಿಸ್ತರಣೆ ಮಾಡಿ ಅಂದಾಗ ಆರ್ಥಿಕ ಚಟುವಟಿಕೆಗೆ ಏನು ಮಾಡೋದು? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಅಂತಿಮವಾಗಿ ಎಲ್ಲರಿಂದ ಅಭಿಪ್ರಾಯ ಪಡೆದು, ಲಾಕ್ ಡೌನ್ ವಿಸ್ತರಣೆನಾ ಅಥವಾ ಅನ್ ಲಾಕ್ ಎಂಬುದರ ಬಗ್ಗೆ ನಿರ್ಧಾರ ಮಾಡಲಿರುವ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಸಿಎಂ ಯಡಿಯೂರಪ್ಪ ಆರ್ಥಿಕ ಚಟುವಟಿಕೆಯ ಸಮಸ್ಯೆಯ ಬಗ್ಗೆ ಹೇಳಿದ್ದಾರೆ