ಬೆಳಗಾವಿ: “ಎಲ್ಲ ಧರ್ಮ, ಧರ್ಮೀಯರನ್ನು ಪ್ರೀತಿಸಿ ಯಾವುದೇ ಭೇದಭಾವ ಮಾಡದೇ ಸೋದರತ್ವದಿಂದ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾವನೆಯೊಂದಿಗೆ ನಡೆದುಕೊಂಡು ಹೋದಾಗ ಜೀವನ ಪಾವನವಾಗುತ್ತದೆ,” ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಖಾನಾಪುರ ತಾಲೂಕಿನ ಸುಕ್ಷೇತ್ರ ಚಿಕ್ಕಮುನವಳ್ಳಿಯ ಆರೂಢ ಮಠದಲ್ಲಿ ಜರುಗಿದ ಸರ್ವ ಧರ್ಮ ಭಾವೈಕ್ಯತೆಯ ಸಮ್ಮೇಳನದಲ್ಲಿ ಭಾಗಿಯಾಗಿ, ಎಲ್ಲ ಮಠಾಧೀಶರ ಆಶೀರ್ವಾದ ಪಡೆದು, ಸಮ್ಮೇಳವನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಸರ್ವ ಜನಾಂಗದ ಶಾಂತಿಯ ತೋಟದಂತೆ ಇಂದು ಮಠಮಾನ್ಯಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನಿಸುತ್ತಿವೆ. ಹಬ್ಬ ಮತ್ತು ಆಚರಣೆಗಳು ಸದಾಕಾಲವೂ ಭಾವೈಕ್ಯತೆಯ ಸಂಕೇತವಾಗಿ ಹೊರಹೊಮ್ಮುತ್ತಿವೆ. ಯುಗಾದಿಯ ಹೋಳಿಗೆಯ ಹೂರಣ, ಕ್ರಿಸ್ಮಸ್ ನ ಉಡುಗೊರೆಗಳು ಮತ್ತು ರಂಜಾನ್ ಖೀರನ್ನು ವಿನಿಮಯ ಮಾಡಿಕೊಳ್ಳುವ ಎಷ್ಟೋ ಕುಟುಂಬಗಳನ್ನು ನಾನು ನೋಡಿದ್ದೇನೆ, ಹಲವು ಬಾರಿ ನಾನೂ ಕೂಡ ಭಾಗವಹಿಸಿದ್ದೇನೆ,” ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಚಿಕ್ಕಮುನವಳ್ಳಿಯ ಶ್ರೀ ದಿವ್ಯಚೇತನ ಶಿವಪುತ್ರ ಮಹಾಸ್ವಾಮಿಗಳು, ಕೋಳಿಗುಡ್ಡದ ಶ್ರೀ ಸ್ವರೂಪಾನಂದ ಮಹಾಸ್ವಾಮಿಗಳು, ಹುಲಿಕಟ್ಟಿಯ ಪರಮ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳು, ಕೊಚೇರಿಯ ಶ್ರೀ ಕಲ್ಮೇಶ್ವರ ಮಹಾಸ್ವಾಮಿಗಳು, ಇತರ ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.