ಬೆಳಗಾವಿ: ಪೆಟ್ರೋಲ್, ಡಿಸೆಲ್, ಗ್ಯಾಸ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬೆಳಗಾವಿಯಲ್ಲಿ ಸೋಮವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೇತೃತ್ವದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಸುಮಾರು ಅರ್ಧ ಗಂಟೆಗಳ ಕಾಲ ಬಿಜೆಪಿ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು. ಡಬಲ್ ಎಂಜಿನ್ ಬಿಜೆಪಿ ಸರಕಾರ ಬಡವರಿಗೆ ಬದುಕಲು ಅವಕಾಶ ಮಾಡಿಕೊಡುತ್ತಿಲ್ಲ. ಶ್ರೀಮಂತರನ್ನಷ್ಟೆ ಶ್ರೀಮಂತರನ್ನಾಗಿಸುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು, ಖಾಲಿ ಸಿಲಿಂಡರ್ ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ನಮಗೆ ಇಂತಹ ಅಚ್ಛೇದಿನ್ ಬೇಕಾಗಿಲ್ಲ. ಇದನ್ನು ಜನರು ನಿರೀಕ್ಷಿಸಿರಲೂ ಇಲ್ಲ. ಬಿಜೆಪಿಗೆ ಜನಸಾಮಾನ್ಯರ ನೋವು ಅರ್ಥವೇ ಆಗುತ್ತಿಲ್ಲ. ಕೇವಲ ಭಾವನಾತ್ಮಕ ವಿಷಯವನ್ನಿಟ್ಟುಕೊಂಡು ಜನರಲ್ಲಿ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಬೀಗುತ್ತಿದೆ. ಹಾಗಾಗಿ ಎಲ್ಲ ಬೆಲೆಗಳನ್ನು ಏರಿಸಿ ಜನಸಾಮಾನ್ಯರನ್ನು ಬಗ್ಗುಬಡಿಯುತ್ತಿದೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಕರ್ನಾಟಕದಿಂದಲೇ ಬಿಜೆಪಿಗೆ ಸೋಲು ಆರಂಭವಾಗಲಿದೆ ಎಂದು ಅವರು ಕಿಡಿಕಾರಿದರು.ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜಿ., ಜಯಶ್ರೀ ಮಾಳಗಿ ಮೊದಲಾದವರಿದ್ದರು.