ಬೆಳಗಾವಿ: ಮಂಡೋಳಿ ಗ್ರಾಮದ 3 ಪುರಾತನ ದೇವಸ್ಥಾನಗಳ ಅಭಿವೃದ್ಧಿಗಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು 1.50 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಿದ್ದು, ಯುಗಾದಿ ಪರ್ವದಂದು ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಪೂಜೆ ನೆರವೇರಿಸಿದರು.
ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದಲ್ಲಿನ ಮೂರು ಪುರಾತನ ದೇವಸ್ಥಾನಗಳಾದ ಶ್ರೀ ಮಾರುತಿ ಮಂದಿರ, ಕಲ್ಮೇಶ್ವರ ಮಂದಿರ ಹಾಗೂ ವಿಠ್ಠಲ ರುಕ್ಮಾಯಿ ಜೀರ್ಣೋದ್ಧಾರ ಕಾಮಗಾರಿಗೆ ಶನಿವಾರ ಯುಗಾದಿ ಪಾಡ್ಯ ದಿನದಂದು ಚಾಲನೆ ನೀಡಿದರು. ಈ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಒಟ್ಟೂ ಒಂದೂವರೆ ಕೋಟಿ ರೂ,ಗಳನ್ನು ಲಕ್ಷ್ಮಿ ಹೆಬ್ಬಾಳಕರ್ ಬಿಡುಗಡೆ ಮಾಡಿಸಿದ್ದಾರೆ.
ಮಂಡೋಳಿ ಗ್ರಾಮದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವ ಸೇವೆಯ ಭಾಗ್ಯ ನನ್ನ ಪಾಲಿಗೆ ಬಂದಿದ್ದು ಆ ದೇವರ ಇಚ್ಛೆಯೇ ಆಗಿದೆ. ನೀವೆಲ್ಲ ಸೇರಿ ಈ ಸೇವಾಕಾರ್ಯದ ಜವಾಬ್ದಾರಿಯನ್ನು ನನಗೆ ವಹಿಸಿರುವುದಕ್ಕೆ ನಾನು ನಿಮ್ಮೆಲ್ಲರಿಗೆ ಆಭಾರಿಯಾಗಿದ್ದೇನೆ ಎಂದು ಭಾವುಕರಾಗಿ ಅವರು ನುಡಿದರು.
ಇಂದು ಯುಗಾದಿ ಹಬ್ಬದ ಶುಭ ಸಂದರ್ಭವಿದ್ದು, ಅದರ ಜೊತೆಗೆ ನನ್ನ ತಾಯಿಯ ಜನ್ಮದಿನವೂ ಇಂದೇ ಇರುವುದು ಇನ್ನೂ ಸಂತೋಷದ ವಿಷಯ. ಹೀಗಾಗಿ ಇವತ್ತಿನ ದಿನ ದುರ್ಗಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು.
ಮನೆ ಮಗಳಿಗಾಗಿ ಜವಾಬ್ದಾರಿ ನಿರ್ವಹಣೆ:
ಮಂಡೋಳಿ ಗ್ರಾಮದಲ್ಲಿ ನಾವೆಲ್ಲರೂ ಸೇರಿ ಭವ್ಯವಾದ ಮಂದಿರವನ್ನು ನಿರ್ಮಿಸೋಣ. ಈಗ ಮಂದಿರ ನಿರ್ಮಾಣಕ್ಕೆ ನಿಧಿ ಮಂಜೂರಾಗಿರುವುದು ಸಾಕಾಗದಿದ್ದರೆ ಈ ನಿಮ್ಮ ಲಕ್ಷ್ಮಿ ಹೆಬ್ಬಾಳಕರ ಮತ್ತಷ್ಟು ನಿಧಿ ತರಲು ತಯಾರಿದ್ದಾಳೆ. ಆದರೆ ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಗ್ರಾಮಸ್ಥರು ಕೈಜೋಡಿಸಲಿ ಎಂಬುದು ನನ್ನ ಬಯಕೆಯಾಗಿದೆ. ನಾನು ನಿಮ್ಮ ಮನೆ ಮಗಳು. ಕೇವಲ ಚುನಾವಣೆಗಾಗಿ ನಾನು ಬರುವವಳಲ್ಲ. ಮನೆ ಮಗಳಾಗಿ ನನ್ನ ಜವಾಬ್ದಾರಿಯನ್ನು ಮನಃಪೂರ್ವಕವಾಗಿ ನಿಭಾಯಿಸುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆಶ್ವಾಸನೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ರಾಜ್ಯ ಸರಕಾರದಿಂದ ಮಂಜೂರಾದ ೧೦ ಕೋಟಿ ರೂಪಾಯಿ ಅನುದಾನವನ್ನು ಸರಕಾರವು ನನ್ನ ವಿನಂತಿಯಂತೆ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿಸಿ, ಸರಕಾರದ ಸುತ್ತೋಲೆಯನ್ನು ಇದೇ ಸಂದರ್ಭದಲ್ಲಿ ಶಾಸಕಿ ಹೆಬ್ಬಾಳಕರ ನೆರೆದ ಗ್ರಾಮಸ್ಥರ ಎದುರು ಓದಿದರು.
ಮಂದಿರ, ನೀರು,ಶಿಕ್ಷಣದಿಂದ ರಾಜಕೀಯ ದೂರ;
ಇನ್ನು ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಡಿ ಹಲಗಾ ಗ್ರಾಮದ ಜೈನ ಬಸದಿಗಾಗಿ ೫೦ ಲಕ್ಷ, ಮುತ್ನಾಳ ಜೈನ ಬಸದಿಗಾಗಿ ೫೦ ಲಕ್ಷ, ಮಣ್ಣೂರ ಜೈನ ಬಸದಿಗಾಗಿ ೫೦ ಲಕ್ಷ ಹಾಗೂ ಹಲವಾರು ಸಮುದಾಯ ಭವನಕ್ಕಾಗಿ ನಿಧಿ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.
ಮಂದಿರದ ವಿಷಯದಲ್ಲಿ ಯಾವತ್ತೂ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಮಂದಿರ, ಕುಡಿಯುವ ನೀರು ಹಾಗೂ ಶಿಕ್ಷಣ ಈ ವಿಷಯಗಳಲ್ಲಿ ನಾನು ಯಾವತ್ತೂ ರಾಜಕಾರಣವನ್ನು ದೂರವಿಟ್ಟು ಕೆಲಸ ಮಾಡಿದ್ದೇನೆ. ಶಾಸಕಿಯಾಗಿ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಪಕ್ಷ, ಭಾಷೆ, ಧರ್ಮಗಳ ಭೇದವನ್ನು ಎಂದಿಗೂ ಮಾಡದೆ ಎಲ್ಲರ ಒಳಿತಿಗಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ದೊಡ್ಡ ಕನಸು ನನಸು:
ನನ್ನ ಅತ್ಯಂತ ಮಹತ್ವಾಕಾಂಕ್ಷೆಯ ರಾಜಹಂಸಗಢ ಕೋಟೆಯಲ್ಲಿ ಮೂರ್ತಿ ಸ್ಥಾಪನೆಗಾಗಿ ಮೂರ್ತಿ ತರಿಸುವ ಕಾರ್ಯವು ಇದೇ ೬ನೇ ತಾರೀಕಿನಿಂದ ಆರಂಭವಾಗಲಿದೆ. ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ಸಾಮಗ್ರಿಗಳು ಸುಮಾರು ೬ ರಿಂದ ೭ ಲಾರಿಗಳಲ್ಲಿ ಆಗಮಿಸಲಿವೆ. ಶಿವಾಜಿ ಮಹಾರಾಜರ ಪಾದಗಳೇ ನನಗಿಂತ ಎತ್ತರವಾಗಿವೆ. ಅಷ್ಟು ಬೃಹತ್ತಾದ ಮೂರ್ತಿ ಸ್ಥಾಪನೆಯಾಗಲಿದೆ ಎಂದು ಲಕ್ಷ್ಮಿ ಹೆಬ್ಬಾಳಕರ ಮಾಹಿತಿ ನೀಡಿದರು.
ರಾಜಹಂಸಗಡ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ ಕರ್ನಾಟಕ- ಮಹಾರಾಷ್ಟ್ರ ಎರಡೂ ರಾಜ್ಯಗಳ ಸೌಹಾರ್ಧತೆಯ ಹಬ್ಬದ ರೀತಿಯಲ್ಲಿ ನಡೆಯಲಿದೆ ಎನ್ನುವ ಮುನ್ಸೂಚನೆಯನ್ನು ಲಕ್ಷ್ಮಿ ಹೆಬ್ಬಾಳಕರ್ ನೀಡಿದರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಶರದ ಪವಾರ, ಮತ್ತೋರ್ವ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್, ಹಾಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಇವರೆಲ್ಲರನ್ನು ಕರೆಸಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಅನಾವರಣಗೊಳಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಎಮ್ಮೆಲ್ಸಿ ಚನ್ನರಾಜ ಹಟ್ಟಿಹೊಳಿ, ಕಳೆದ ನಾಲ್ಕು ವರ್ಷಗಳಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಇದನ್ನು ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅನಗತ್ಯವಾಗಿ ಎಲ್ಲದರಲ್ಲೂ ರಾಜಕೀಯ ತರುತ್ತಿದ್ದಾರೆ. ನಾವು- ನೀವೆಲ್ಲ ಸೇರಿ ಅಂತವರನ್ನು ದೂರ ಇಡೋಣ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ ಮಾತನಾಡಿ, ಲಕ್ಷ್ಮಿ ಹೆಬ್ಬಾಳಕರ ಓರ್ವ ಶಾಸಕಿಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ನುಡಿದರು.
ಮಂಡೋಳಿ ಗ್ರಾಮದ ಗಣ್ಯರಾದ ಹಾಗೂ ಎಪಿಎಂಸಿ ಅಧ್ಯಕ್ಷರಾದ ಯುವರಾಜ ಕದಮ, ಲಕ್ಷ್ಮಿ ಕಣಬರಕರ, ಮಹಾದೇವ ಪಾಟೀಲ, ಕೃಷ್ಣಾ ಶಹಾಪುರಕರ, ರೂಪೇಶ ಗೋಡ್ಸೆ, ಮಲ್ಲೇಶಿ ಮುತಗೇಕರ, ನಾರಾಯಣ ಫಗರೆ, ಶಿವಾಜಿ ಚಲವೇಟಕರ, ಎಂ.ಕೆ. ಪಾಟೀಲ, ಬಾಳಾಸಾಹೇಬ ಕಣಬರಕರ, ಸಂತೋಷ ತಳವಾರ, ಮಾರುತಿ ಮನ್ನೋಳಕರ, ಕಲ್ಲಪ್ಪಾ ಸವಾಪಿ, ಜೋತಿಬಾ ಸವಾಪಿ ಹಾಗೂ ಮಂದಿರ ಜೀರ್ಣೋದ್ದಾರ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಅವರ ಸಹೋದರ ಎಮ್ಮೆಲ್ಸಿ ಚನ್ನರಾಜ ಹಟ್ಟಿಹೊಳಿ ಹಾಗೂ ಪುತ್ರ ಮೃಣಾಲ ಹೆಬ್ಬಾಳಕರ ಅವರನ್ನು ಮಂಡೋಳಿ ಗ್ರಾಮಸ್ಥರು ಅತ್ಯಂತ ಅದ್ದೂರಿಯಾಗಿ ಬರಮಾಡಿಕೊಂಡರು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.