ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ನಾಲ್ಕೈದು ದಿನ ವಿಳಂಬವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಹೊಸ ಌಪ್ ಸಿದ್ಧಪಡಿಸಲು ಇ-ಗವರ್ನೆನ್ಸ್ಗೆ ಕೇಳಿಕೊಂಡಿದ್ದೇವೆ. ಹೊಸ ಌಪ್ ಸಿದ್ಧಪಡಿಸಲು 4-5ರಿಂದ ದಿನ ಬೇಕಾಗಲಿದೆ ಅಂತ ಹೇಳಿದ್ದಾಗಿ ಸಚಿವರು ತಿಳಿಸಿದ್ದಾರೆ.
ಬಾಪೂಜಿ ಸೇವಾ ಕೇಂದ್ರಗಳಲ್ಲೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಇದರ ಜೊತೆ ಸ್ವಯಂಸೇವಾ ಸಂಸ್ಥೆಗಳಿಗೂ ಆಹ್ವಾನ ನೀಡಿದ್ದೆವು. ಅವರು ಕೂಡ 4-5ರಿಂದ ದಿನ ಸಮಯ ನೀಡುವಂತೆ ಕೇಳಿದ್ದಾರೆ. ಹೀಗಾಗಿ ಸಂಪುಟ ಸದಸ್ಯರ ಸಲಹೆ ಮೇರೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಿಕೆ ಮಾಡಲಾಗಿದೆ ಎಂದರು.