ಕೂಗು ನಿಮ್ಮದು ಧ್ವನಿ ನಮ್ಮದು

ಲಕ್ಷ್ಮಿ ಹೆಬ್ಬಾಳ್ಕರ್ ತವರಲ್ಲೇ ಗೃಹ ಲಕ್ಷ್ಮಿ ಯೋಜನೆ ಲಾಂಚ್: ಬೆಳಗಾವಿಯಿಂದಲೇ ಏಕೆ ಚಾಲನೆ? ಇಲ್ಲಿದೆ ಕಾರಣ

ಬೆಂಗಳೂರು/ಬೆಳಗಾವಿ: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ ಮೊಟ್ಟಮೊದಲ ಯೋಜನೆಯಾಗಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ನೀಡುವ ‘ಶಕ್ತಿ’ ಈ ರೀತಿ ಉದ್ಘಾಟನೆಗೊಳ್ಳಲಿದೆ. ಇದೇ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್‌ನಿಂದ ನಾಡಿನ ಶಕ್ತಿ aಕೇಂದ್ರವಾದ ವಿಧಾನಸೌಧಕ್ಕೆ ತೆರಳುವ ರೂಟ್‌ ನಂ.43 ಬಸ್‌ನಲ್ಲಿ ಕಂಡಕ್ಟರ್‌ ರೀತಿ ಟಿಕೆಟ್‌ ವಿತರಿಸುವ ಮೂಲಕ ಈ ಮಹಾತ್ವಾಕಾಂಕ್ಷಿ ಯೋಜನೆಗೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಿದ್ದಾರೆ. ಇನ್ನು ಗೃಹ ಲಕ್ಷ್ಮೀ ಯೋಜನೆಯನ್ನು ಆಗಸ್ಟ್‌ 17 ಅಥವಾ 18 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡುವ ಕುರಿತು ಚರ್ಚೆಗಳು ನಡೆದಿವೆ. ಬೆಳಗಾವಿಯಲ್ಲೇ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡುವುದ್ಯಾಕೆ? ಏನು ಕಾರಣ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಕಾಂಗ್ರೆಸ್ ಪಾಲಿಗೆ ಬೆಳಗಾವಿ ಅದೃಷ್ಟದ ಜಿಲ್ಲೆಯಾಗಿದೆ. ಯಾಕಂದ್ರೆ ಬೆಳಗಾವಿಯಿಂದಲೇ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯಗಳನ್ನು ಪ್ರಾರಂಭಿಸಿದ್ದ ಕಾಂಗ್ರೆಸ್ ಅಭೂತ ಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಿದೆ. ಬೆಳಗಾವಿಯಿಂದಲೇ ಪ್ರಜಾ ಧ್ವನಿ ಯಾತ್ರೆಗೆ ಚಾಲನೆ ನೀಡಿ ಕಾಂಗ್ರೆಸ್ ಸಕ್ಸಸ್ ಆಗಿತ್ತು. ಯುವನಿಧಿ ಗ್ಯಾರಂಟಿ ಸಹ ರಾಹುಲ್ ಗಾಂಧಿ ಅವರು ಬೆಳಗಾವಿಯಲ್ಲೇ ಘೋಷಣೆ ಮಾಡಿದ್ದರು. ಇದೀಗ ಗೃಹ ಲಕ್ಷ್ಮೀ ಯೋಜನೆಗೆ ಬೆಳಗಾವಿಯಲ್ಲೇ ಚಾಲನೆ ನೀಡಲು ತೀರ್ಮಾನಿಸಲಾಗಿದೆ.

ಬೆಳಗಾವಿಯಿಂದ ಚಾಲನೆ ನೀಡಿದರೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಗೆ ಸಂದೇಶ ರವಾನೆಯಾಗಲಿದೆ. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಹೊಸ ಸಂದೇಶ ನೀಡಿದಂತಾಗುತ್ತದೆ. ಬೆಂಗಳೂರು ಬಿಟ್ಟರೆ ಅತಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಜಿಲ್ಲೆ ಬೆಳಗಾವಿ. ಹೀಗಾಗಿ ಬೆಳಗಾವಿಯಿಂದ ಗೃಹ ಲಕ್ಷ್ಮಿ ಲಾಂಚ್ ಮಾಡಿದರೆ ಕನಿಷ್ಟ 8ರಿಂದ 10 ಜಿಲ್ಲೆಗಳ ಸಂಘಟನೆಗೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿದೆ.

error: Content is protected !!