ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ನಾಮಪತ್ರ ಸಲ್ಲಿಸಲಿದ್ದು, ಅಪಾರ ಬೆಂಬಲಿಗರನ್ನೊಳಗೊಂಡು ಸಿಪಿಎಡ್ ಮೈದಾನದಿಂದ ಈಗಾಗಲೇ ಮೆರವಣಿಗೆ ಆರಂಭವಾಗಿದೆ.
ಇದಕ್ಕೂ ಮುನ್ನ ಲಕ್ಷ್ಮೀ ಹೆಬ್ಬಾಳಕರ್ ಅವರ ತಾಯಿ ಗಿರಿಜಾ ಬಸವರಾಜ ಹಟ್ಟಿಹೊಳಿ ಹಾಗೂ ಸಹೋದರಿ ಸೇರಿ, ನಮ್ಮ ಸಂಸ್ಕೃತಿ, ಸಂಪ್ರದಾಯದಂತೆ ಗೋಮಾತೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು.
ಅಲ್ಲಿಂದ ಸುಳೇಬಾವಿಗೆ ತೆರಳಿದ ಲಕ್ಷ್ಮೀ ಹೆಬ್ಬಾಳಕರ ಈ ಭಾಗದ ಜಾಗೃತ ಶಕ್ತಿ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ್ ಹೆಬ್ಬಾಳಕರ ಸೇರಿದಂತೆ ಕುಟುಂಬದ ಸದಸ್ಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
ನಂತರ ಹಿಂಡಲಗಾದ ಶ್ರೀ ಮಹಾಗಣಪತಿ ದೇಗುಲಕ್ಕೆ ಭೇಟಿ ನೀಡಿ ಅಲ್ಲಿಯೂ ವಿಶೇಷ ಪೂಜೆ ನೆರವೇರಿಸಿದರು. ಅಲ್ಲಿಂದ ಸಿಪಿಎಡ್ ಮೈದಾನಕ್ಕೆ ಆಗಮಿಸಿ ಅಲ್ಲಿಂದ ಅಪಾರ ಸಂಖ್ಯೆಯ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರನ್ನೊಳಗೊಂಡು ಮೆರವಣಿಗೆಯಲ್ಲಿ ತೆರಳುತ್ತಿದ್ದಾರೆ.
ಇನ್ನು ಕೆಲ ಸಮಯದಲ್ಲೇ ರಾಣಿ ಚನ್ನಮ್ಮ ಸರ್ಕಲ್ ಮೂಲಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.