ಬೆಳಗಾವಿ: ಬೆಳಗಾವಿ ಗ್ರಾಮೀಣ ಭಾಗದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಸುಳೇಭಾವಿಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಪೂಜೆಯ ಬಳಿಕ ಟಿವಿ9 ಕನ್ನಡ ವಾಹಿನಿಯ ಬೆಳಗಾವಿ ವರದಿಗಾರನೊಂದಿಗೆ ಮಾತಾಡಿದ ಅವರು ತಮ್ಮ ಕ್ಷೇತ್ರದಲ್ಲಿ ಜಾತಿ, ಸಮುದಾಯ ಲೆಕ್ಕಕ್ಕೆ ಬರಲ್ಲ, ಕಳೆದ 5 ವರ್ಷಗಳಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳಷ್ಟೇ ಗಣನೆಗೆ ಬರುತ್ತವೆ ಮತ್ತು ಅದೇ ಆಧಾರದ ಮೇಲೆ ಜನ ತಮಗೆ ವೋಟು ನೀಡುತ್ತಾರೆ ಎಂದು ಹೇಳಿದರು. ಲಕ್ಷ್ಮಣ ಸವದಿಯವರು ಕಾಂಗ್ರೆಸ್ ಪಕ್ಷವನ್ನು ಸೇರಿರುವುದು ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಒದಗಿಸಿದೆ ಎಂದ ಅವರು ನಾಳೆಯೇ ತಮ್ಮ ಬದ್ಧ ರಾಜಕೀಯ ವೈರಿ ರಮೇಶ್ ಜಾರಕಿಹೊಳಿ ಕ್ಷೇತ್ರ ಗೋಕಾಕ್ ನಲ್ಲಿ ಪ್ರಚಾರ ಮಾಡುವುದಾಗಿ ಹೇಳಿದರು